Thursday, December 1, 2022
spot_img
Homeಅಂಕಣಕಾನೂನು ಕಣಜ : ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮ 1987

ಕಾನೂನು ಕಣಜ : ಕಾನೂನು ಸೇವೆಗಳ ಪ್ರಾಧಿಕಾರಗಳ ಅಧಿನಿಯಮ 1987

ಈ ಅಧಿನಿಯಮವು ಕೇಂದ್ರ ಸರಕಾರದ ಮೂಲಕ ಪ್ರಕಟವಾದ ಕೇಂದ್ರೀಯ ಶಾಸನವಾಗಿದ್ದು ಇದು ಕರ್ನಾಟಕ ರಾಜ್ಯದಲ್ಲಿ 1995ರ ನ.9ರಿಂದ ಜಾರಿಗೆ ಬಂದಿರುತ್ತದೆ. ಯಾವುದೆ ವ್ಯಕ್ತಿ ತನಗೆ ನ್ಯಾಯಬದ್ಧವಾಗಿ ಸಿಗಬೇಕಾಗಿರುವ ಹಕ್ಕಿನಿಂದ ಅಥವಾ ಸೌಕರ್ಯದಿಂದ ವಂಚಿತನಾಗಿ ಅನ್ಯಾಯಕ್ಕೊಳಗಾದ ಸಂದರ್ಭದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿಯು ಸರ್ವೇಸಾಮಾನ್ಯವಾಗಿರುತ್ತದೆ. ಆದರೆ ಇವರಲ್ಲಿ ಅನೇಕರು ಕಾನೂನಿನ ಬಗ್ಗೆ ಸರಿಯಾದ ಅರಿವು ಇಲ್ಲದೆ ಅಥವಾ ತಮ್ಮ ಆರ್ಥಿಕ, ಸಾಮಾಜಿಕ ಅಥವಾ ಇನ್ನಾವುದೇ ಕಾರಣದಿಂದ ನ್ಯಾಯಾಲಯದ ಮೊರೆ ಹೋಗದೆ ಅನ್ಯಾಯಕ್ಕೊಳಗಾಗಿ ತಮ್ಮಷ್ಟಕ್ಕೆ ತಾವು ಕೊರಗುವುದನ್ನು ನಾವು ಸಮಾಜದಲ್ಲಿ ಕಾಣಬಹುದು. ಈ ಕಾರಣದಿಂದ ಸಮಾಜದ ಅಸಹಾಯಕ ಮತ್ತು ಹಿಂದುಳಿದ ಬಡಪಾಯಿ ವ್ಯಕ್ತಿಗಳು ತಮಗೆ ಉಂಟಾಗಿರುವ ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯವನ್ನು ಪಡೆಯುವಂತೆ ಉಚಿತ ಕಾನೂನು ನೆರವನ್ನು ಸಂಬಂಧಪಟ್ಟ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ನೀಡುವುದೆ ಈ ಮೇಲ್ಕಾಣಿಸಿದ ಅಧಿನಿಯಮದ ಮುಖ್ಯ ಉದ್ದೇಶವಾಗಿರುತ್ತದೆ. ಈ ಪ್ರಕಾರ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವನ್ನು, ನಮ್ಮ ರಾಜ್ಯಮಟ್ಟದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸ್ಥಾಪಿಸಲಾಗಿರುತ್ತದೆ. ಮಾತ್ರವಲ್ಲದೆ ನಮ್ಮ ದೇಶದ ಉನ್ನತ ಮಟ್ಟದ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಸಮಿತಿಯನ್ನು, ಹೈಕೋರ್ಟ್ ಮಟ್ಟದಲ್ಲಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯನ್ನು ಹಾಗೂ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವೆಗಳ ಸಮಿತಿಯನ್ನು ಸ್ಥಾಪಿಸಿದ್ದು, ಇವುಗಳು ನಿರಂತರವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿವೆ. ಉಚಿತ ಕಾನೂನು ನೆರವನ್ನು ಅಥವಾ ಸಲಹೆಯನ್ನು ಪಡೆಯಲು ಈ ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ಅರ್ಹನಾಗಿರುವ ಯಾವುದೇ ವ್ಯಕ್ತಿಯು ತನ್ನ ಸಮೀಪದ ತಾಲೂಕು ನ್ಯಾಯಾಲಯದ ಕಾನೂನು ಸೇವಾ ಸಮಿತಿಗೆ ಅಥವಾ ಜಿಲ್ಲಾ ನ್ಯಾಯಾಲಯದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಿ ಉಚಿತ ಕಾನೂನು ನೆರವು ಅಥವಾ ಸಲಹೆಯನ್ನು ಪಡೆಯಬಹುದಾಗಿದೆ. ಈ ಸಂಬಂಧವಾಗಿ ಅರ್ಜಿದಾರನು ತನಗೆ ಸಂಬಂಧಪಟ್ಟ ಜಾತಿ ಅಥವಾ ಆದಾಯಕ್ಕೆ ಸಂಬಂಧಿಸಿದಂತೆ ಒಂದು ಪ್ರಮಾಣ ಪತ್ರವನ್ನು (ಅಫಿದಾವಿತ್) ತನ್ನ ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಯಾವುದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳು, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆಯ ಕಾರ್ಮಿಕ ವರ್ಗದವರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶ ಮುಂತಾದವುಗಳಿಗೆ
ತುತ್ತಾದವರು, ಮತೀಯ ಕಾರಣದಿಂದ ದೌರ್ಜನ್ಯಕ್ಕೆ ಬಲಿಯಾದವರು, ಮಾನಸಿಕ ಅಥವಾ ಬೇರಾವುದೇ ನ್ಯೂನತೆಯನ್ನು ಹೊಂದಿದವರು, ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರು, ರಕ್ಷಣಾ ಗೃಹ, ಮನೋರೋಗಿಗಳ ಆಸ್ಪತ್ರೆ ಮುಂತಾದವುಗಳಲ್ಲಿ ಅಭಿರಕ್ಷೆಯಲ್ಲಿರುವವರು, ವಾರ್ಷಿಕ ಆದಾಯ 1 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವ ಎಲ್ಲಾ ವರ್ಗದ ಜನರು, ಈ ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ದೇಶದ ಅತ್ಯಂತ ಕೆಳಹಂತದ ನ್ಯಾಯಾಲಯದಿಂದ ಹಿಡಿದು ಸರ್ವೋಚ್ಛ ನ್ಯಾಯಾಲಯದ (ಸುಪ್ರೀಂ ಕೋರ್ಟ್) ವರೆಗೆ ಪಡೆಯಬಹುದಾಗಿದೆ.

ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು,
ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

error: Content is protected !!