ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ರೈಸ್ಟ್ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ವೃತ್ತಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಅ. 20ರಂದು ಗಾಂಧಿ ಮೈದಾನದಲ್ಲಿ ನಡೆಯಿತು.
ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಸುರೇಂದ್ರ ಶೆಟ್ಟಿ ಕ್ರೀಡಾಜ್ಯೋತಿ ಬೆಳಗಿಸಿದರು. ಮಕ್ಕಳನ್ನು ಮೊಬೈಲ್ನಿಂದ ದೂರ ಮಾಡಿ ಕ್ರೀಡೆಯ ಕಡೆಗೆ ಆಸಕ್ತರನ್ನಾಗಿ ಮಾಡಬೇಕು, ಇಂತಹ ಕ್ರೀಡಾಕೂಟಗಳಿಂದ ದೇಶಕ್ಕೆ ಒಳ್ಳೆಯ ಪ್ರತಿಭೆಗಳನ್ನು ನೀಡಲು ಸಾಧ್ಯ ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ದೈಹಿಕ ಕ್ಷಮತೆ ಜೀವನದಲ್ಲಿ ಬಹಳ ಮುಖ್ಯ, ಕ್ರೀಡೆ ಅದಕ್ಕೆ ಸಹಕಾರಿಯಾಗಿದೆ. ಶಿಕ್ಷಣ ಎಂದರೆ ಕೇವಲ ತರಗತಿಯೊಳಗಿನ ಪಾಠ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳನ್ನೂ ಒಳಗೊಂಡಿದೆ. ಶಿಕ್ಷಣದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಕಾರ್ಕಳ ಪೊಲೀಸ್ ಉಪ ನಿರೀಕ್ಷಕ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿ ಪ್ರಸನ್ನ ಎಂ.ಎಸ್ ಅವರಿಗೆ ಕ್ರೀಡಾಪಟುಗಳು ಗೌರವ ವಂದನೆ ಸಲ್ಲಿಸಿದರು.
ನಿರಂತರ ಶ್ರಮ ಅಗತ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ಕಿಂಗ್ ಚರ್ಚಿನ ಧರ್ಮಗುರುಗಳಾದ ವಂ.ಫಾ. ಕ್ಲೆಮೆಂಟ್ ಮಸ್ಕರೇನ್ಹಸ್ ಮಾತನಾಡಿ, ಭಾರತ ಕ್ರೀಡಾಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದು ಇದನ್ನು ಮುಂದುವರಿಸಿಕೊಂಡು ಹೋಗುವುದು ಈಗಿನ ಮಕ್ಕಳ ಜವಾಬ್ದಾರಿ. ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ ನಿರಂತರ ಪರಿಶ್ರಮ ಅಗತ್ಯವೆಂದರು.
ಪುರಸಭಾ ಸದಸ್ಯ ಶುಭದ ರಾವ್, ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್, ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂತೋಷ್ ಶೆಟ್ಟಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ತಾಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಶಾಲೆಯ ಮುಖ್ಯ ಶಿಕ್ಷಕ ಮೇರಿಯನ್ ಡಿ’ಸೋಜ, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಮತ್ತಿತರು ಉಪಸ್ಥಿತರಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್, ಕೃಷ್ಣಪ್ರಸಾದ್ ಹಾಗೂ ಕು. ಲಾವಣ್ಯ ಕ್ರೀಡಾಕೂಟ ಸಂಘಟಿಸಿದ್ದು, ಶ್ರೀ ಮದ್ ಭುವನೇಂದ್ರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂಜಯ್ ಸಹಕರಿಸಿದರು.
ಸಂಸ್ಥೆಯ ಪದವಿಪೂರ್ವ ವಿಭಾಗದ ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಸಂಗೀತ ವಂದಿಸಿದರು.
