ನಿರ್ಣಾಯಕ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಹೊಸದಿಲ್ಲಿ: ಉಕ್ರೇನ್‌ನಲ್ಲಿ ರಷ್ಯಾ ಮತ್ತೆ ರಣಭೀಕರ ಕದನ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಶೀಘ್ರವೇ ಉಕ್ರೇನ್ ತೊರೆಯುವಂತೆ ಭಾರತ ತನ್ನ ನಾಗರಿಕರಿಗೆ ಸಂದೇಶ ರವಾನಿಸಿದೆ.ಆದಷ್ಟು ಬೇಗ ಉಕ್ರೇನ್ ತೊರೆದು ಸ್ವದೇಶಕ್ಕೆ ಮರಳುವಂತೆ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಕುರಿತು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರಕಟಣೆ ಹೊರಡಿಸಿದ್ದು, ಉಕ್ರೇನ್‌ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾರತೀಯ ನಾಗರಿಕರು, ಲಭ್ಯವಿರುವ ವಿಧಾನಗಳ ಮೂಲಕ ಉಕ್ರೇನ್‌ನಿಂದ ಬೇಗನೆ ಹೊರಡುವಂತೆ ಸೂಚಿಸಲಾಗಿದೆ ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ನಾಲ್ಕು ಉಕ್ರೇನಿಯನ್ ಪ್ರದೇಶಗಳಲ್ಲಿ ಸಮರ ಕಾನೂನನ್ನು ಪರಿಚಯಿಸಿದ್ದು, ಯುದ್ಧದ ತೀವ್ರತೆ ಮೊದಲಿಗಿಂತ ಹೆಚ್ಚಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಭಾರತೀಯ ನಾಗರಿಕರು ಉಕ್ರೇನ್ ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ಮನವಿ ಮಾಡಿದೆ.
ಯುದ್ಧಪೀಡಿತ ಖೆರ್ಸನ್‌ನಿಂದ ಈಗಾಗಲೇ ಸ್ಥಳೀಯರು ಪಲಾಯನ ಮಾಡುತ್ತಿದ್ದು, ಡ್ನಿಪ್ರೊ ನದಿಯ ಎಡದಂಡೆಯ ಯುದ್ಧ ವಲಯ ಪ್ರದೇಶದಿಂದ ನಾಗರಿಕರನ್ನು ಸ್ಥಳಾಂತರಿಸಲು ಉಕ್ರೇನ್ ಸರ್ಕಾರ ಶತಪಯ್ರಯತ್ನ ಮಾಡುತ್ತಿದೆ. ಖೆರ್ಸನ್ ಸೇರಿದಂತೆ ರಷ್ಯಾ ಭಾಗಶಃ ಆಕ್ರಮಿಸಿಕೊಂಡಿರುವ ಉಕ್ರೇನಿಯನ್ ಪ್ರದೇಶಗಳ ಮೇಲೆ, ತನ್ನ ಹಿಡಿತವನ್ನು ದೃಢಪಡಿಸಲು ಯುದ್ಧದ ತೀವ್ರತೆಯನ್ನು ಹೆಚ್ಚಿಸಿದೆ.
ರಷ್ಯಾ-ಉಕ್ರೇನ್ ಯುದ್ಧ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದೇಶ ತೊರೆಯುವಂತೆ ಭಾರತೀಯ ನಾಗರಿಕರಲ್ಲಿ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮನವಿ ಮಾಡಿರುವುದು ಗಮನ ಸೆಳೆದಿದೆ.