ವಿಮಾನದ ಟಿಕೆಟ್ ದರದ ಆಸುಪಾಸಿನಲ್ಲಿ ಬಸ್ ಟಿಕೆಟ್ ದರ
ಬೆಂಗಳೂರು: ದೀಪಾವಳಿ ಹಬ್ಬದ ರಜೆಯಲ್ಲಿ ಊರಿಗೆ ಹೋಗಲು ತಯಾರಿ ನಡೆಸಿದವರಿಗೆ ಖಾಸಗಿ ಬಸ್‌ಗಳ ಟಿಕೆಟ್ ದರ ಶಾಕ್ ನೀಡುತ್ತಿದೆ. ಹಬ್ಬದ ಪ್ರಯಾಣಿಕರ ಲಾಭ ಪಡೆಯುವ ಹುನ್ನಾರದಲ್ಲಿ ಎಲ್ಲ ಖಾಸಗಿ ಬಸ್‌ಗಳ ಟಿಕೆಟ್ ದರ ಸರಿಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ. ಹಬ್ಬದ ನಿಮಿತ್ತ ಸಾಲು ಸಾಲು ರಜೆಗಳಿವೆ. ಬೆಂಗಳೂರಿನಲ್ಲಿ ನೌಕರಿ ಮಾಡುವವರೆಲ್ಲ ಊರಿಗೆ ಹೋಗಲು ತಯಾರಾಗಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಖಾಸಗಿ ಬಸ್‌ಗಳ ಮಾಲೀಕರು ಹಗಲು ದರೋಡೆಗೆ ಇಳಿದಿದ್ದಾರೆ.
ಬೆಂಗಳೂರಿನಿಂದ ಊರಿಗೆ ಹೋಗುವ ಬಸ್‌ಗಳ ಮಾಲೀಕರು ಮನಸೋ ಇಚ್ಚೆ ದರ ವಿಧಿಸಿದ್ದಾರೆ. ಬೆಂಗಳೂರಿಂದ ಮಂಗಳೂರಿಗೆ ಮಾಮೂಲು ದಿನಗಳಲ್ಲಿ ಟಿಕೆಟ್ ದರ 1,000-1200 ರೂ. ಇದ್ದರೆ ಈಗ ದಿಢೀರ್ ಎಂದು 3600ರೂ. ಆಗಿದೆ. ವಿಮಾನದ ಟಿಕೆಟ್ ದರ ಕೂಡ 4,000 ರೂ. ಆಸುಪಾಸು ಇದೆ. ಈಗ ಬಸ್‌ನಲ್ಲಿ ಹೋಗುವುದಕ್ಕಿಂತ ವಿಮಾನದಲ್ಲೇ ಹೋಗುವುದೇ ಉತ್ತಮ ಎನ್ನುತ್ತಿದ್ದಾರೆ ಜನ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಲು ಬರೋಬ್ಬರಿ 5,500 ರೂ.ಫಿಕ್ಸ್ ಮಾಡಿ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿವೆ. ಅಕ್ಟೋಬರ್ 22, 4ನೇ ಶನಿವಾರ ಸೇರಿ ದೀಪಾವಳಿಗೆ 5ದಿನ ರಜೆ ಇದೆ. ಶುಕ್ರವಾರ ಬಹು ಮಂದಿ ಊರಿಗೆ ಹೋಗ್ತಾರೆ.