ಒಂದುದಿನ ಔತಣಕೆ ಉಪವಾಸಕ್ಕಿನ್ನೊಂದು|
ಸಂದಣಿಯ ದಿನವೊಂದು, ಬಿಡುವು ದಿನವೊದು||
ಹೊಂದಿರ್ದೊಡುಭಯಮಂ ಜೀವಕದು ಸು ಚಲನ|
ಒಂದೆ ಕಾಲ್ನಡೆ ಸುಖವೆ–ಮಂಕುತಿಮ್ಮ||
ಬದುಕಿನಲ್ಲಿ ಒಂದು ದಿನ ಔತಣವನ್ನು ಅನುಭವಿಸಿದರೆ ಇನ್ನೊಂದು ದಿನ ಉಪವಾಸವನ್ನು ಆಚರಿಸಬೇಕು. ಒಂದು ಜನಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಇನ್ನೊಂದು ದಿನ ಬಿಡುವನ್ನು ಮಾಡಿಕೊಳ್ಳಬೇಕು. ಹೀಗೆ ಎರಡನ್ನು ಹೊಂದಿಸಿಕೊಂಡಾಗಲೇ ಜೀವನದಲ್ಲಿ ಸುಖದ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದೇ ಕಾಲಿನ ನಡಿಗೆ ಯಾವ ರೀತಿಯಲ್ಲಿ ಕಷ್ಟವಾಗುತ್ತದೊ ಅದೇ ರೀತಿಯಲ್ಲಿ ಯಾವುದೇ ಒಂದಕ್ಕೆ ಒತ್ತು ಕೊಡದೆ ಎರಡನ್ನು ಹೊಂದಿಸಿಕೊಂಡಾಗಲೇ ಜೀವಕ್ಕೆ ಸಂತೋಷದ ಅನುಭವ ಆಗುವುದು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

ವೈವಿಧ್ಯತೆಯಿಂದಲೇ ಬದುಕಿನ ಸ್ವಾದಿಷ್ಟದ ಅನುಭವವಾಗುವುದು. ಒಂದು ವಾರ ದುಡಿದು ಒಂದು ದಿನ ವಿಶ್ರಾಂತಿ ತೆಗೆದುಕೊಂಡವರ ಅನುಭವಕ್ಕೂ ವಾರವಿಡೀ ವಿಶ್ರಾಂತಿ ಪಡೆದವರ ಅನುಭವಕ್ಕೂ ಭಿನ್ನತೆ ಇರುತ್ತದೆ. ದುಡಿದವನ ವಿಶ್ರಾಂತಿಯ ಅನುಭವ ವಿಶೇಷವಾಗಿರುತ್ತದೆ. ದುಡಿಮೆ ಮತ್ತು ವಿಶ್ರಾಂತಿಯನ್ನು ಹೊಂದಿಸಿಕೊಂಡಾಗಲೇ ಬದುಕು ಸುಮಧುರವಾಗುವುದು. ಬರೀ ವಿಶ್ರಾಂತಿಯೇ ಜೀವನವಾದರೆ ಬದುಕು ನೀರಸವಾಗುತ್ತದೆ. ಸಿಹಿ ಕಹಿ, ನೋವು ನಲಿವು, ಕಷ್ಟ ಸುಖ, ದುಡಿಮೆ ವಿಶ್ರಾಂತಿ, ಊಟ ಉಪವಾಸ ಹೀಗೆ ಎರಡನ್ನು ಹೊಂದಿಸಿಕೊಂಡು ಸಂತೋಷದಿಂದ ಅನುಭವಿಸುತ್ತಾ ಹೋಗಬೇಕು. ಬರೀ ಸುಖ, ಬರೀ ಸಿಹಿ, ಪೂರ್ಣ ಬಿಡುವು ಮುದವನ್ನು ನೀಡದು. ಯಾಕೆಂದರೆ ಒಂದೇ ಕಾಲಿನಲ್ಲಿ ನಡೆಯುವುದು ಕಷ್ಟ. ನಡೆಯುವಾಗ ಎರಡು ಕಾಲುಗಳನ್ನು ಸಮನಾಗಿ ಬಳಸಿದಾಗಲೇ ನಮ್ಮ ಸಂಚಾರ ಸುಖವಾಗಿರುವುದು.
ನೂರು ಮಾತಿಂದೇನು ಹೂ ಬಿರಿಯುವುದೆ ಗಿಡದಿ?|
ಕಟ್ಟಿ ಪಾತೆಯ ಅದಕೆ ಹಾಕು ಗೊಬ್ಬರವ||
ನೀರೆರೆದು ಆರೈಕೆ ಮಾಡದಿರೆ ಫಲವೆಲ್ಲಿ?|
ದುಡಿಯದಿರೆ ರುಚಿಯೆಲ್ಲಿ? – ಮುದ್ದುರಾಮ||
ಎಂಬ ಕೆ. ಶಿವಪ್ಪನವರ ನುಡಿಯಂತೆ ಜನರೊಂದಿಗೆ ಬೆರತು ಸತ್ಕರ್ಮಗಳನ್ನು ಮಾಡುವುದರಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ದೇಹದ ಮತ್ತು ಮನಸ್ಸಿನ ಹಿತಕ್ಕೆ ಆಹಾರ ಮತ್ತು ವಿಶ್ರಾಂತಿ ಎಷ್ಟು ಮುಖ್ಯವೋ ದುಡಿಮೆಯೂ ಅಷ್ಟೇ ಮುಖ್ಯ. ಒಂದು ದಿನ ಸಂಭ್ರಮದ ಔತಣವನ್ನು ಅನುಭವಿಸಿದರೆ ಇನ್ನೊಂದು ದಿನ ಉಪವಾಸ ವ್ರತವನ್ನು ಆಚರಿಸಬೇಕು. ಒಂದು ದಿನ ಜನಸಂದಣಿಯ ಸಮಾರಂಭದಲ್ಲಿ ಭಾಗಿಯಾದರೆ ಇನ್ನೊಂದು ದಿನ ಪೂರ್ಣ ಬಿಡುವನ್ನು ಹೊಂದಬೇಕು. ಹೀಗೆ ದುಡಿಮೆ ಮತ್ತು ಬಿಡುವಿನ ಸಮನ್ವಯತೆಯನ್ನು ಸಾಧಿಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ, ಕಾರ್ಕಳ ಘಟಕ.
