ಡಿಸಿಪಿ ವಿರುದ್ಧ ಸಿಬ್ಬಂದಿಯಿಂದ ದೂರಿನ ಸುರಿಮಳೆ
ಬೆಂಗಳೂರು: ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ನೋಡಿರುವ ದೂರು ಸೋರಿಕೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 25ಕ್ಕೂ ಹೆಚ್ಚು ಎಫ್ಡಿಎ, ಎಸ್ಡಿಎ ಸಿಬ್ಬಂದಿ ಎಡಿಜಿಪಿಗೆ ದೂರು ನೀಡಿದ್ದಾರೆ. ಸೆ.3ರಂದು ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯ ವಿಷಯಗಳನ್ನ ದೊಡ್ಡದಾಗಿ ಮಾಡಿ ಕಾನೂನುಬಾಹಿರವಾಗಿ ಶಿಸ್ತು ಕ್ರಮಕ್ಕೆ ಕೈಗೊಳ್ಳುತ್ತಾರೆ ಎನ್ನುವುದು ನಿಶಾ ಜೇಮ್ಸ್ ವಿರುದ್ಧ ಇರುವ ದೊಡ್ಡ ಆರೋಪ. ಉದ್ದೇಶಪೂರ್ವಕವಾಗಿ ಸಿಬ್ಬಂದಿಯನ್ನು ತಡರಾತ್ರಿವರೆಗೂ ಕಚೇರಿಯಲ್ಲಿ ಉಳಿಸಿಕೊಳ್ಳುತ್ತಾರೆ. ನಿಶಾ ಜೇಮ್ಸ್ ಸಂಜೆ 6ರ ನಂತರ ಕೆಲಸ ಶುರುಮಾಡಿ ರಾತ್ರಿ 3ಕ್ಕೆ ಮುಗಿಸುತ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜತೆ ಸಮಯ ಕಳೆಯಲು ಆಗ್ತಿಲ್ಲ. ನಿಶಾ ಜೇಮ್ಸ್ ಕಿರುಕುಳದಿಂದಾಗಿ ನಮಗೆ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ರಾಹೀನತೆಯಿಂದ ಮರೆವು ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ ಎಂದು ಸಿಬ್ಬಂದಿ ನೀಡಿದ್ದ ದೂರಿನ ಪ್ರತಿ ಈಗ ವೈರಲ್ ಆಗಿದೆ.
ಕನ್ನಡದಲ್ಲಿ ವ್ಯವಹರಿಸುವುದಿಲ್ಲ, ಸಿಬ್ಬಂದಿಯನ್ನು ತುಚ್ಛವಾಗಿ ಕಾಣ್ತಾರೆ ಎಂಬ ಆರೋಪಗಳೂ ಇವೆ. ನಿಶಾ ಜೇಮ್ಸ್ 25 ಸಿಬ್ಬಂದಿಯ ವೇತನ ಬಡ್ತಿಯನ್ನ ತಡೆ ಹಿಡಿದಿದ್ದಾರೆ. ಅವರು ಕಡತಗಳನ್ನ ಸಮಯಕ್ಕೆ ಸರಿಯಾಗಿ ನೋಡದೆ, ತಿಂಗಳುಗಟ್ಟಲೆ ಸಹಿ ಮಾಡದೆ ಪೆಂಡಿಂಗ್ ಇಡ್ತಾರೆ. ಇದರಿಂದ ಕಡತ ವಿಲೇವಾರಿ ತಡವಾಗುತ್ತಿದೆ. ನಿಶಾ ಜೇಮ್ಸ್ ಕಚೇರಿಯಲ್ಲಿ ಹಿಂದೂ ದೇವರುಗಳ ಫೋಟೋ ಇಡಲಿಕ್ಕೆ ಅವಕಾಶ ನೀಡುವುದಿಲ್ಲ. ಕನ್ನಡದಲ್ಲಿ ವ್ಯವಹರಿಸುವುದಿಲ್ಲ, ಕನ್ನಡ ಮಾತಾಡುವ ಸಿಬ್ಬಂದಿಯನ್ನ ತುಚ್ಛವಾಗಿ ಕಾಣ್ತಾರೆ. ಕಚೇರಿಯ ತೊಂದರೆ ಕಷ್ಟಗಳನ್ನ ಹೇಳಲಿಕ್ಕೆ ಸಿಬ್ಬಂದಿ ಬಂದ್ರೆ ಭಿಕ್ಷುಕರಂತೆ ಕಾಣ್ತಾರೆ. ಮಹಿಳಾ ಟೈಪಿಸ್ಟ್ ತಾನು ಗರ್ಭಿಣಿ ಎಂದು ತಿಳಿಸಿದರೂ ಕಚೇರಿಯಲ್ಲಿ 9 ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದಾರೆ. ಇದರಿಂದ ಗರ್ಭಿಣಿ ಟೈಪಿಸ್ಟ್ ಸಿಬ್ಬಂದಿಗೆ ಮಾನಸಿಕ ಹಿಂಸೆಯಾಗಿ ಗರ್ಭಪಾತವಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ದೂರು ನೀಡಿದ್ದಾರೆ.