ಅ. 28 ರಂದು ವಿಶ್ವದಾದ್ಯಂತ ಕನ್ನಡದ ಕಂಪು

ಕಾರ್ಕಳ : ಅ. 28ರಂದು ಕೋಟಿ ಕಂಠ ಗಾಯನದ ಮೂಲಕ ವಿಶ್ವದಾದ್ಯಂತ ಕನ್ನಡ ಕಂಪು ಪಸರಿಸಲಿದೆ. ಅಂದು 10 ಸಾವಿರ ಸ್ಥಳಗಳಲ್ಲಿ ಒಂದು ಕೋಟಿ ಮಂದಿಯಿಂದ ಏಕಕಾಲದಲ್ಲಿ ಗಾಯನ ಮೊಳಗಲಿದೆ. ಇದು ದೇಶದ ಇತಿಹಾಸದಲ್ಲೇ ಮೊದಲು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನೀಲ್‌ ಕುಮಾರ್‌ ಹೇಳಿದರು.
ಅವರು ಕಾರ್ಕಳ ತಾ.ಪಂ. ಸಭಾಂಗಣದಲ್ಲಿ ಭಾನುವಾರ ಕೋಟಿ ಕಂಠ ಗಾಯನ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
ಮಾತಾಡು ಮಾತಾಡು ಕನ್ನಡದ ಮುಂದುವರಿದ ಭಾಗವೇ ಕೋಟಿ ಕಂಠ ಗಾಯನ ಕಾರ್ಯಕ್ರಮ. ಇದೊಂದು ವಿಶೇಷ ಅಭಿಯಾನವಾಗಿದ್ದು ಇದರೊಂದಿಗೆ ನ. 1ರ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಎದುರುಗೊಳ್ಳುವಂತಾಗಲಿದೆ ಎಂದು ಸುನೀಲ್‌ ಕುಮಾರ್‌ ತಿಳಿಸಿದರು.

ಕಾರ್ಕಳದಲ್ಲಿ 1 ಲಕ್ಷ ಮಂದಿ
ಕಾರ್ಕಳ ಹೆಬ್ರಿ ತಾಲೂಕಿನ 1 ಲಕ್ಷ ಮಂದಿ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಕಾಲೇಜು, ಸಂಘ – ಸಂಸ್ಥೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಜೀವಿನಿ, ಸರಕಾರಿ ಅಧಿಕಾರಿ, ಸಿಬ್ಬಂದಿ ವರ್ಗ, ಯುವಕ-ಯುವತಿ ಮಂಡಲ, ಸ್ತ್ರೀ ಶಕ್ತಿ ಸಂಘಟನೆ ಸೇರಿದಂತೆ ಎಲ್ಲರೂ ಈ ಒಂದು ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸುನೀಲ್‌ ಕುಮಾರ್ ಮನವಿ ಮಾಡಿಕೊಂಡರು.

6 ಹಾಡು
ಅ. 28ರ ಬೆಳಿಗ್ಗೆ 11 ಗಂಟೆಗೆ ಸ್ವಾಗತದ ಬಳಿಕ ನಾಡಗೀತೆ, ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡಬೇಕು. ಕಾರ್ಯಕ್ರಮದಲ್ಲಿ ಭಾಷಣವಿಲ್ಲ. ಅವಕಾಶವಿದ್ದಲ್ಲಿ ಹೆಚ್ಚು ಹಾಡಬಹುದಾಗಿದೆ. ಸಂಕಲ್ಪದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ ಎಂದು ಸುನೀಲ್‌ ಕುಮಾರ್‌ ಹೇಳಿದರು.

ನೋಂದಣಿ
ಕ್ಯೂಆರ್‌ ಕೋಡ್‌ ಮೂಲಕ ಸಂಸ್ಥೆಯ ಹೆಸರು, ಎಷ್ಟು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿಯನ್ನು ನೋಂದಣಿ ಮಾಡಬೇಕು. ಕನಿಷ್ಠ 100 ಮಂದಿ, ಗರಿಷ್ಠ ಎಷ್ಟು ಮಂದಿಯಾದರೂ ಪಾಲ್ಗೊಳ್ಳಬಹುದಾಗಿದೆ. ಎಲ್ಲರೂ ಸಂತೋಷ, ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸುನೀಲ್‌ ಕುಮಾರ್‌ ಹೇಳಿದರು.

ಯೋಧರೂ ಹಾಡ್ತಾರೆ
ಯೋಧರು ಸೇರಿದಂತೆ ದೇಶದ ವಿವಿಧೆಡೆಯಿರುವ ಕನ್ನಡಿಗರು ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಲಿದ್ದಾರೆ. ದುಬೈ, ಬಹರೈನ್‌, ಆಸ್ಟ್ರೇಲಿಯಾದಲ್ಲಿರುವ ಕನ್ನಡ ಸಂಘಗಳು ಕಾರ್ಯಕ್ರಮ ಆಯೋಜನೆ ಮಾಡುತ್ತಿವೆ. ಶ್ರೀ ರವಿಶಂಕರ ಗುರೂಜಿ ಅವರು 154 ದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿದ್ದಾರೆ. ದೋಣಿ, ವಿಮಾನ, ನೆಲ ಹೀಗೆ ಎಲ್ಲೆಡೆ ಕನ್ನಡದ ಹಾಡು ಝೇಂಕರಿಸಲಿದೆ. ಕಂಠೀರವ ಸ್ಟುಡಿಯೋದಲ್ಲಿ ಏಕಕಾಲದಲ್ಲಿ 50 ಸಾವಿರ ಮಂದಿ ಹಾಡು ಹಾಡಲಿದ್ದಾರೆ. ಮುಖ್ಯಮಂತ್ರಿ, ಸಚಿವ ಸಂಪುಟ ಸಹೋದ್ಯೋಗಿಗಳು ಭಾಗವಹಿಸಲಿದ್ದಾರೆ ಎಂದರು. ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ತಾ.ಪಂ. ಇಒ ಗುರುದತ್, ಹೆಬ್ರಿ ಇಒ ಶಶಿಧರ್, ಡಿವೈಎಸ್ಪಿ ವಿಜಯ ಪ್ರಸಾದ್, ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪ್ರಾಂಶುಪಾಲರು, ವಿವಿಧ – ಸಂಘ ಸಂಸ್ಥೆ ಪದಾಧಿಕಾರಿಗಳು, ಪಿಡಿಒ ಭಾಗವಹಿಸಿದ್ದರು.

ಮಾರ್ಗದರ್ಶಿ ಕೈಪಿಡಿ ಬಿಡುಗಡೆ
ಅಬ್ದುಲ್‌ ನಝೀರ್‌ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ನಿರ್ದೇಶನದಲ್ಲಿ ಹೊರತರಲಾದ ಗ್ರಾಮ ಪಂಚಾಯತ್ ದೂರದೃಷ್ಟಿ ಯೋಜನೆಯ ಮಾರ್ಗದರ್ಶಿ ಕೈಪಿಡಿಯನ್ನು‌ ಸಚಿವ ಸುನೀಲ್‌ ಕುಮಾರ್‌ ಇದೇ ವೇಳೆ ಬಿಡುಗಡೆಗೊಳಿಸಿ ನೂತನ ಯೋಜನೆಗೆ ಚಾಲನೆ ನೀಡಿದರು. ಅಬ್ದುಲ್‌ ನಝೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ವಿಕೇಂದ್ರೀಕೃತ ತರಬೇತಿ ಸಂಯೋಜಕ ಹೆಚ್.‌ ಜಯವಂತ ರಾವ್ ಸಮಗ್ರವಾಗಿ ಮಾಹಿತಿ ನೀಡಿದರು.
error: Content is protected !!
Scroll to Top