ಹರಟೆ ಹೊಡೆಯುತ್ತಿದ್ದ ಸಭಿಕರನ್ನು ಕಂಡು ಕೆರಳಿ ಕೆಂಡವಾದ ಸಚಿವ
ಲಖನೌ: ತನ್ನದೇ ಪಕ್ಷದ ಕಾರ್ಯಕರ್ತರು ತನ್ನ ಭಾಷಣ ಕೇಳದೆ ಹರಟೆಯಲ್ಲಿ ಮಗ್ನರಾಗಿದ್ದನ್ನು ಕಂಡು ಕೆರಳಿದ ಉತ್ತರ ಪ್ರದೇಶದ ಮೀನುಗಾರಿಕಾ ಸಚಿವ ಸಂಜಯ್ ನಿಶಾದ್ ಮೈಕ್ ಎಸೆದು ಉಗ್ರವತಾರ ತೋರಿಸಿದ ಘಟನೆ ಸಂಭವಿಸಿದೆ.
ಮಾವುವಾದಲ್ಲಿ ಕಾರ್ಯಕರ್ತರ ಸಭೆಯೊಂದರಲ್ಲಿ ನಿಶಾದ್ ಮಾತನಾಡುತ್ತಿದ್ದರು. ಆದರೆ ಕಾರ್ಯಕರ್ತರು ಅವರ ಭಾಷಣ ಕೇಳದೆ ತಮ್ಮಲ್ಲೇ ಹರಟೆ ಹೊಡೆಯುವುದರಲ್ಲಿ ಮಗ್ನರಾಗಿದ್ದರು. ಇದರಿಂದ ಸಿಟ್ಟುಗೊಂಡ ನಿಶಾದ್ ನನ್ನಿಂದ ದೊಡ್ಡ ನಾಯಕ ನಿಮ್ಮ ನಡುವೆ ಇದ್ದರೆ ಹೇಳಿ, ಇಲ್ಲವೇ ನನ್ನ ಮಾತುಗಳನ್ನು ಕೇಳಿ ಎಂದು ಆಕ್ರೋಶದಿಂದ ನುಡಿದು ಮೈಕನ್ನು ಸಭಿಕರ ಮೇಲೆ ಎಸೆದರು.
ನಂತರ ಮೈಕ್ ಹಿಡಿದು ಮತ್ತೆ ಬಾಷಣ ಶುರು ಮಾಡಿದ ನಿಶಾದ್ ಕಾರ್ಯಕರ್ತರಿಗೆ ಸಭಾ ಶಿಸ್ತಿನ ಕುರಿತು ಪಾಠ ಮಾಡಿದರು. ಎಷ್ಟೇ ದೊಡ್ಡ ನಾಯಕನಾಗಿದ್ದರೂ ಇನ್ನೊಬ್ಬರು ಹೇಳಿದಂತೆ ಮಾಡಿದರೆ ಸರ್ವನಾಶವಾಗಿ ಹೋಗುತ್ತಾನೆ. ನಾನು ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದೇನೆ. ನಿಮಗೆ ಮನಸ್ಸಿದ್ದರೆ ಕೇಳಿ, ಇಲ್ಲದಿದ್ದರೆ ಸುಮ್ಮನಿರಿ ಎಂದರು. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯಕ್ರಮ ಇಲ್ಲಿ ಆಯೋಜಿಸಲಾಗಿದೆ. ಆದರೆ ಇಲ್ಲಿ ಈ ಕಾರ್ಯಕ್ರಮ ಮಾಡಬಾರದಿತ್ತು ಎಂದು ಹೇಳಿ ಸಿಟ್ಟಿನಿಂದ ವೇದಿಕೆಯಿಳಿದು ನಡೆದರು.