ವಿಶ್ವಕರ್ಮ ಸಹಕಾರ ಬ್ಯಾಂಕಿನ ನವೀಕೃತ ಕಾರ್ಕಳ ಶಾಖೆಯ ಉದ್ಘಾಟನೆ

ಸಂಕಷ್ಟ ಎದುರಾದಾಗ ಪ್ರತಿಭೆ ಅನಾವರಣಗೊಳ್ಳುವುದು – ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ

ತ್ವರಿತಗತಿ ಸೇವೆಯಿಂದಾಗಿ ಸಹಕಾರಿ ಸಂಘಗಳು ಸಫಲತೆ ಸಾಧಿಸಿದೆ – ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌

ವ್ಯಾವಹಾರಿಕ ಮಾತ್ರವಲ್ಲದೇ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಣೆ – ಬೋಳ ಸದಾಶಿವ ಶೆಟ್ಟಿ

ಕಾರ್ಕಳ : ಸಂಸ್ಥೆಯಿಂದ ವ್ಯಕ್ತಿ ಬೆಳೆಯುವ ಬದಲು ವ್ಯಕ್ತಿಯಿಂದ ಸಂಸ್ಥೆ ಬೆಳೆಯಬೇಕು. ಆಗ ಮಾತ್ರ ಒಂದು ಸಂಸ್ಥೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಹೇಳಿದರು.
ಕಾರ್ಕಳ ಬಸ್‌ ನಿಲ್ದಾಣ ಬಳಿಯ ಕಾರ್ಲ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ವಿಶ್ವಕರ್ಮ ಸಹಕಾರ ಬ್ಯಾಂಕಿನ ನವೀಕೃತ ಶಾಖೆ ಉದ್ಘಾಟಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಂಕಷ್ಟ ಎದುರಾದಾಗ ಪ್ರತಿಭೆ ಅನಾವರಣಗೊಳ್ಳುತ್ತದೆ. ಕೋರ್ಟ್‌ ಕಂಟ್ರೋಲ್‌ ಆಕ್ಟ್‌ ತಂದಾಗ ಸಮಾಜ ಬಾಂಧವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಹೊಸ ಚಿಂತನೆಯಿಂದ ವಿಶ್ವಕರ್ಮ ಸಹಕಾರ ಬ್ಯಾಂಕ್ ಮೂಡಿಬಂದಿದೆ. ಇದು ಈಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಬಹಳ ಸಂತಸ ತಂದಿದೆ ಎಂದು ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.
ನವೀಕೃತ ಶಾಖೆಯ ಕಚೇರಿ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಜನರಿಗೆ ತ್ವರಿತಗತಿಯಲ್ಲಿ ಸೇವೆಯನ್ನು ಕೊಡುವಲ್ಲಿ ಸಹಕಾರ ಸಂಘ ಸಫಲತೆಯನ್ನು ಪಡೆದಿದೆ. ವ್ಯಕ್ತಿ ಯಾವುದೇ ಜಾತಿಗೆ ಸೀಮಿತಗೊಳ್ಳದೇ ಕೆಲಸ ಕಾರ್ಯ ಮಾಡಿದಲ್ಲಿ ಹೆಚ್ಚಿನ ಯಶಸ್ಸು ಕಾಣಲು ಸಾಧ್ಯವಾಗುವುದು. ನಾನು ಜಾತಿಗೆ ಸೀಮಿತವಾಗಿ ಕೆಲಸ ಮಾಡದಿರುವ ಕಾರಣ ನಮ್ಮ ಬ್ಯಾಂಕ್‌ ಇಷ್ಟೊಂದು ವಿಶಾಲವಾಗಿ ಬೆಳೆಯುವಂತಾಗಿದೆ ಎಂದರು.
ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಮಾತನಾಡಿ, ಸಹಕಾರಿ ಸಂಘಗಳು ಕೇವಲ ವ್ಯವಹಾರಿಕ ಸಂಬಂಧ ಮಾತ್ರವಲ್ಲದೆ ಮಾನವೀಯ ಸಂಬಂಧ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್. ಆರ್. ಹರೀಶ್ ಆಚಾರ್ಯ, ನಮ್ಮ ಸಹಕಾರಿ ಸಂಘದಲ್ಲಿ ಸಿಬಂದಿ ಕೊರೆತೆಯಿದೆ ಅಥವ ಕಾರ್ಯವೈಖರಿ ಚೆನ್ನಾಗಿಲ್ಲ ಎಂಬ ಮಾತು ಬಂದಿಲ್ಲ. ಇದು ಸಹಕಾರಿ ಸಂಘದ ಸಿಬಂದಿ ನಡುವಿನ ಸಮನ್ವಯತೆ, ಸಹಕಾರಕ್ಕೆ ಸಾಕ್ಷಿ. ಇದರಿಂದಲೇ ವಿಶ್ವ ಕರ್ಮ ಸಹಕಾರಿ ಸಂಘ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗಿದೆ ಎಂದರು.

ಸನ್ಮಾನ
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ವತಿಯಿಂದ 2022 ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಪಡೆದ ಕಾರ್ಕಳ ಸತೀಶ್ ಆಚಾರ್ಯ, ಕಟ್ಟಡದ ಇಂಜಿನಿಯರ್ ವಿಜಯ್ ಕುಮಾರ್ ಶೆಟ್ಟಿ, ಆರ್ಕಿಟೆಕ್ಟ್ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು.

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್ಯ, ಮೂಡುಬಿದಿರೆ ಎಸ್‌ಕೆಎಫ್‌ ಎಲಿಕ್ಷರ್‌ ಇಂಡಿಯಾದ ಆಡಳಿತ ನಿರ್ದೇಶಕ ಜಿ. ರಾಮಕೃಷ್ಣ ಆಚಾರ್, ಉಡುಪಿ ಜಿ.ಎಸ್‌.ಬಿ. ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ, ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಕಾರ್ಕಳ ಪ್ರಿಯದರ್ಶಿನಿ ಗ್ಯಾಸ್ ಏಜೆನ್ಸಿಯ ಬಿ. ಕೃಷ್ಣಮೂರ್ತಿ, ಕುಕ್ಕುಂದೂರಿನ ಉದ್ಯಮಿ ತ್ರಿವಿಕ್ರಮ ಕಿಣಿ, ಕಾರ್ಕಳದ ಶ್ರೀ ಉಚ್ಚಂಗಿ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರಿ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದ ಕಾರ್ಯದರ್ಶಿ ಜಿತಿನ್‌ ಜೀಜು ಕಾರ್ಯಕ್ರಮ ನಿರ್ವಹಿಸಿದರು.





























































































































































































































error: Content is protected !!
Scroll to Top