ಡ್ರಗ್‌ ವ್ಯಸನಿ ಸಮಾಜಕ್ಕೆ ಹೊರೆ : ಪಿಎಸ್‌ಐ ಸಿದ್ದಪ್ಪ ನರನೂರ್

ಮೂಡಬಿದಿರೆಯಲ್ಲಿ ಮಾದಕ ವಸ್ತು ವ್ಯಸನ ಕಾಯ್ದೆ ಜಾಗೃತಿ ಕಾರ್ಯಕ್ರಮ

ಮೂಡಬಿದಿರೆ: ಮಾದಕ ವಸ್ತುಗಳ ಅತಿಯಾದ ಸೇವನೆಯಿಂದ ನಿಯಂತ್ರಣ ಕಳೆದುಕೊಂಡ ವ್ಯಕ್ತಿ ಸುವ್ಯವಸ್ಥಿತ ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಸಮಾಜಕ್ಕೆ ಹೊರೆಯಾಗಿ ಪರಿಣಮಿಸುತ್ತಾನೆ ಎಂದು ಮೂಡಬಿದಿರೆ ಪಿಎಸ್‌ಐ ಸಿದ್ದಪ್ಪ ನರನೂರ್ ತಿಳಿಸಿದರು.
ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಾದಕ ವ್ಯಸನ ಜಾಗೃತಿ ಸಂಘ ಸೆ.29 ರಂದು ಆಯೋಜಿಸಿದ್ದ ಮಾದಕ ವ್ಯಸನ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮಲು ಪದಾರ್ಥಗಳ ಸೇವನೆ ಕೆಲವು ನಿಮಿಷಗಳ ಕಾಲ ಆನಂದ ನೀಡಿದರೂ ದೂರಗಾಮಿ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಮಾದಕ ವಸ್ತುಗಳ ಸೇವನೆಯಿಂದ ನರಮಂಡಲ ನಿಷ್ಕ್ರಿವಾಗುತ್ತಾ ಸಾಗಿ, ಯಕೃತ್ತಿನ ತೀವ್ರ ಕಾಯಿಲೆ, ಜಠರ ಹಾನಿ, ಮೂರ್ಚೆ ರೋಗ, ನರ ರೋಗ, ಸ್ಮೃತಿ ಭ್ರಮಣೆ, ಬುದ್ಧಿಮಾಂದ್ಯತೆಯಂಥ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳಾದ ಮದ್ಯ, ತಂಬಾಕು, ಗಾಂಜಾ, ಕೊಕೇನ್ , ಓಪಿಯಮ್, ಹೆರಾಯಿನ್, ನಿದ್ದೆ ಮಾತ್ರೆಗಳು, ವೈಟನರ್, ಪೆಟ್ರೋಲಿಯಮ್ ಉತ್ಪನ್ನಗಳ ದುಷ್ಪಾರಿಣಾಮವನ್ನು ವಿವರಿಸಿದರು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯ ಕುರಿತು ಮಾಹಿತಿ ನೀಡಿದರು.
ಮರವೊಂದು ಸದೃಢವಾಗಿ ಬೆಳೆಯಲು ಹೇಗೆ ಟೊಂಗೆಗಳನ್ನು ಕತ್ತರಿಸುತ್ತಾ ಸಾಗಬೇಕೋ, ಹಾಗೆಯೇ ವಿದ್ಯಾರ್ಥಿಗಳನ್ನು ಮುಂದೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬೆಳಸಲು ಇಂತಹ ಪಿಡುಗುಗಳಿಂದ ದೂರವಿರಿಸಬೇಕು. ಮನುಷ್ಯನ ಯಾವುದೇ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಪ್ರಕೃತಿಯಲ್ಲಿಯೇ ಪರಿಹಾರವಿದೆ, ಅದನ್ನು ಬಿಟ್ಟು ಇಂತಹ ಚಟಗಳಿಗೆ ದಾಸರಾದರೆ ಬದುಕು ಬಲಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಮಹಮ್ಮದ್ ಸದಾಕತ್, ಇಂದು ಇತರರ ಪ್ರೇರಣೆ, ಒತ್ತಡ ಹಾಗೂ ದುಷ್ಚಟಗಳ ಪ್ರಯೋಗಕ್ಕೆ ಬಲಿಯಾಗಿ ಯುವಕ – ಯುವತಿಯರು ಮಾದಕ ಚಟಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಅಂತಹ ವ್ಯಕ್ತಿಗಳಿಂದ ದೂರವಿರಬೇಕು ಎಂದರು.
ಮಾದಕ ವ್ಯಸನ ಜಾಗೃತಿ ಸಂಘದ ಸಂಚಾಲಕರಾದ ಟಿ. ಎ. ಎನ್. ಖಂಡಿಗೆ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಲೋಕೇಶ್ ಪೂಜಾರಿ ನಿರೂಪಿಸಿ, ವಂದಿಸಿದರು.





























































































































































































































error: Content is protected !!
Scroll to Top