Sunday, October 2, 2022
spot_img
Homeಸುದ್ದಿಸೆರೆಯಾದ ಉಗ್ರ ಮಾಝ್‌ ತಂದೆ ಹೃದಯಾಘಾತದಿಂದ ನಿಧನ

ಸೆರೆಯಾದ ಉಗ್ರ ಮಾಝ್‌ ತಂದೆ ಹೃದಯಾಘಾತದಿಂದ ನಿಧನ

ಮಂಗಳೂರು: ರಾಷ್ಟ್ರೀಯ ತನಿಖಾ ಸಂಸ್ಥೆ ಕೆಲ ದಿನಗಳ ಹಿಂದೆ ಐಸಿಸ್‌ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಶಂಕೆಯಲ್ಲಿ ಸೆರೆ ಹಿಡಿದಿರುವ ಉಗ್ರ ಮಾಝ್ ಅಹ್ಮದ್‌ನ ತಂದೆ ಶುಕ್ರವಾರ ಸಂಜೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ.
ಮಾಝ್ ಅಹ್ಮದ್‌ನನ್ನು ಎನ್ಐಎ ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಶಿವಮೊಗ್ಗದಲ್ಲಿ ಸೆ.21 ರಂದು ಬಂಧಿಸಲಾಗಿತ್ತು. ನಿನ್ನೆ ಸಂಜೆ ಶಂಕಿತ ಉಗ್ರನ ತಂದೆ ಮುನೀರ್ ಅಹ್ಮದ್‌ಗೆ (57) ತೀವ್ರ ಹೃದಯಾಘಾತವಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5 ಗಂಟೆಗೆ ನಿಧನರಾದರು.
ಮುನೀರ್ ತೀರ್ಥಹಳ್ಳಿಯವರಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಮಾಝ್ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಹಾಗೂ ಈ ಸಂಬಂಧ ಅವರ ತಂದೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಂಜಿನಿಯರಿಂಗ್ ಪದವೀಧರನಾಗಿರುವ ಮಾಝ್, ಈ ಹಿಂದೆ ಮಂಗಳೂರಿನ ಗೋಡೆಗಳ ಮೇಲೆ ಭಯೋತ್ಪಾದಕ ಬರಹಗಳನ್ನು ಬರೆದು 2 ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ. ಆ ಸಂದರ್ಭದಲ್ಲಿ ಮಾಝ್ ತಂದೆ ಮುನೀರ್‌ಗೆ ಅಧಿಕ ರಕ್ತದೊತ್ತಡ ಪ್ರಾರಂಭವಾಗಿತ್ತು. ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಮಾಝ್ ಬಂಧನದಿಂದ ಮನನೊಂದ ಮುನೀರ್ ಅವರು ಅನಾರೋಗ್ಯಕ್ಕೀಡಾಗಿದ್ದರು. ಸಂಜೆ ವೇಳೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಆ ನಂತರ ಅವರು ಸಾವನ್ನಪ್ಪಿದರು ಎಂದು ಮುನೀರ್ ಸಹೋದರ ಇಲಿಯಾಸ್ ತಿಳಿಸಿದ್ದಾರೆ. ಮೃತ ಮುನೀರ್ ಅವರು ದಂತ ವೈದ್ಯರಾಗಿದ್ದರು ಹಾಗೂ ತಮ್ಮದೇ ಉದ್ಯಮ ನಡೆಸುತ್ತಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!