Sunday, October 2, 2022
spot_img
Homeಸುದ್ದಿಎಲ್ಲ ಅರ್ಜಿದರರಿಗೂ ಖಾತಾ : ಪುರಸಭೆ ಸದಸ್ಯ ಶುಭದ ರಾವ್ ಆಗ್ರಹ

ಎಲ್ಲ ಅರ್ಜಿದರರಿಗೂ ಖಾತಾ : ಪುರಸಭೆ ಸದಸ್ಯ ಶುಭದ ರಾವ್ ಆಗ್ರಹ

ಭರವಸೆ ಮೂಡಿಸಿದ ಹೈಕೋರ್ಟ್‌ ಆದೇಶ : ಸರಕಾರದ ನಿರ್ಲಕ್ಷ್ಯ ವಿಳಂಬಕ್ಕೆ ಕಾರಣ ಆರೋಪ

ಕಾರ್ಕಳ: ಕಳೆದ ಹಲವು ವರ್ಷಗಳಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸಿಂಗಲ್ ಲೇಔಟ್ ಸಮಸ್ಯೆಯಿಂದ ಜಮೀನು ಖರೀದಿ, ಮಾರಾಟ ಮತ್ತು ಮನೆ ನಿರ್ಮಾಣ ಅಸಾಧ್ಯವಾಗಿದ್ದು ನೂರಾರು ಕುಟುಂಬಗಳು ಆತಂಕದಲ್ಲಿದ್ದವು. ಸಮಸ್ಯೆಗೆ ಸ್ಪಂದಿಸಬೇಕಾದ ಸರಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದ ಕಾರಣ ಪರಿಹಾರ ಸಾಧ್ಯವಾಗಲಿಲ್ಲ. ಅದರೆ ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಜನರಲ್ಲಿ ಭರವಸೆ ಮೂಡಿಸಿದೆ. ಈ‌ ಆದೇಶವನ್ನೇ ಮಾದರಿಯಾಗಿ ಎಲ್ಲಾ ಅರ್ಜಿದಾರರಿಗೂ ಖಾತಾ ನೀಡುವಂತೆ ಪುರಸಭಾ ಸದಸ್ಯ ಶುಭದ ರಾವ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಕಳದ ವಕೀಲರೊಬ್ಬರು ತಮ್ಮದೇ ಜಮೀನಿಗೆ ಸಂಬಂಧಿಸಿದಂತೆ ಖಾತಾ (ನಮೂನೆ-3) ಸಮಸ್ಯೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಶನ್ (1921/2022) ದಾಖಲಿಸಿದ್ದು ಈ ಪ್ರಕರಣದಲ್ಲಿ ಕಳೆದ ಸೆ.3ರಂದು 8 ವಾರದ ಒಳಗಾಗಿ ಖಾತಾ ನೀಡಬೇಕೆಂದು ಆದೇಶವಾಗಿದೆ. ಈ ಆದೇಶದ ಪ್ರಕಾರ ಖಾತಾ ನೀಡುವಂತೆ ಅವರು ಪುರಸಭೆಗೆ ಮನವಿ ಮಾಡಿದ್ದಾರೆ. ಇದು ಆತಂಕದಲ್ಲಿದ ಜನರಲ್ಲಿ‌ ಭರವಸೆಯನ್ನು ಮೂಡಿಸಿದೆ ಎಂದರು.
ಸರಕಾರ ಮತ್ತು ಜನಪ್ರತಿನಿಧಿಗಳು ಪರಿಹರಿಸಬೇಕಿದ್ದ ಸಮಸ್ಯೆಯೊಂದಕ್ಕೆ ವಕೀಲರ ಪ್ರಯತ್ನದಿಂದ ಪರಿಹಾರ ಸಿಗುವ ಸಾಧ್ಯತೆ ಇದೆ. ಅವರನ್ನು ಜನತೆಯ ಪರವಾಗಿ ಅಭಿನಂದಿಸುತ್ತೇನೆ. ಖಾತಾ ಸಮಸ್ಯೆಗೆ ನಾನಾ ಕಾರಣಗಳನ್ನು ಕೊಡುತ್ತಿದ್ದ ಸಚಿವ ಸುನೀಲ್ ಕುಮಾರ್ ಇದಕ್ಕೆ ಉತ್ತರಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಸಿಂಗಲ್ ಲೇಔಟ್ ಸಮಸ್ಯೆಗೆ ತಿಂಗಳೊಳಗೆ ಪರಿಹಾರ ಎಂದು ಅವರು ಕಳೆದ ವರ್ಷ ಇಂಜಿನಿಯರ್ ದಿನಾಚರಣೆಯ ಕಾರ್ಯಕ್ರದಲ್ಲಿ ನೀಡಿದ ಹೇಳಿಕೆಗೆ ಒಂದು‌ ವರ್ಷವಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇಚ್ಚಾಶಕ್ತಿ ಇದಿದ್ದರೆ ತಮ್ಮದೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು ಎಂದರು.
ಈಗಾಗಲೇ ವಿಧಾನಸಭೆಯ ಅಧಿವೇಶನದಲ್ಲಿ ಹೊಸ ಕಾನೂನು ರೂಪಿಸುವ ಅನುಮೋದನೆ ದೊರಕ್ಕಿದ್ದು, ಅದು ಶೀಘ್ರ ಜಾರಿಯಾಗಿ ಶಾಶ್ವತ ಪರಿಹಾರ ಸಿಗುವುವಂತೆ ಪ್ರಯತ್ನಿಸಿ ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಹರೀಶ್‌ ದೇವಾಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!