Sunday, October 2, 2022
spot_img
Homeಸುದ್ದಿ2.30 ನಿಮಿಷದಲ್ಲಿ ಹಾಡಬೇಕು ಜಯಭಾರತ ಜನನಿಯ ತನುಜಾತೆ…

2.30 ನಿಮಿಷದಲ್ಲಿ ಹಾಡಬೇಕು ಜಯಭಾರತ ಜನನಿಯ ತನುಜಾತೆ…

ನಾಡಗೀತೆ ಸಮಯ, ದಾಟಿ ವಿವಾದಕ್ಕೆ ತೆರೆ

ಬೆಂಗಳೂರು: ನಾಡಗೀತೆಯ ಒಂದಕ್ಷರವನ್ನೂ ಬಿಡದೆ ದಿ.ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ದಾಟಿಯಲ್ಲಿ ನಾಡಗೀತೆಯನ್ನು ಹಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇನ್ನು ಮುಂದೆ ರಾಷ್ಟ್ರಕವಿ ಕುವೆಂಪು ರಚಿಸಿರುವ ಜಯಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಆಲಾಪ, ಪುನರಾವರ್ತನೆ ಇಲ್ಲದಂತೆ, 2 ನಿಮಿಷ 30 ಸೆಕೆಂಡ್​ನಲ್ಲಿ ಹಾಡಲು ಸರ್ಕಾರ ಅನುಮತಿಸಿದೆ. ಎಸ್‌.ಆರ್‌. ಲೀಲಾವತಿ ಸಮಿತಿ ಶಿಫಾರಸ್ಸನ್ನು ಸರ್ಕಾರ ಅಧಿಕೃತಗೊಳಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಸಿಎಂ ಒಪ್ಪಿಗೆ ನೀಡಿದರು.
2005ರಿಂದಲೂ ನಾಡಗೀತೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ ನನೆಗುದಿಗೆ ಬಿದ್ದಿತ್ತು. 2006ರಲ್ಲಿ ಸಾಹಿತಿ ವಸಂತ ಕನಕಾಪುರೆ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿತ್ತು. ಕನಕಾಪುರೆ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಚನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚನೆ ಮಾಡಿದ್ದ ಸರ್ಕಾರ, ಬಳಿಕ ಹಿರಿಯ ಸಂಗೀತ ವಿದುಷಿ ಎಸ್.ಆರ್. ಲೀಲಾವತಿ ಅಧ್ಯಕ್ಷತೆಯಲ್ಲಿ 18 ಸದಸ್ಯರ ಸಮಿತಿಯನ್ನು ರಚಿಸಿತ್ತು. ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡಬೇಕೆಂದು ಲೀಲಾವತಿ ಸಮಿತಿ ಶಿಫಾರಸು ಮಾಡಿತ್ತು.
ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿ. ಸುನೀಲ್ ಕುಮಾರ್ ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವಂತೆ ಹಿರಿಯ ಸಂಗೀತ ವಿದುಷಿ ಎಸ್.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ ಹದಿನೆಂಟು ಜನರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ ಎರಡು ನಿಮಿಷ ಮೂವತ್ತು ಸೆಕೆಂಡ್​ಗಳಲ್ಲಿ ನಾಡಗೀತೆ ಹಾಡಬೇಕೆಂದು ನೀಡಿದ್ದ ಶಿಫಾರಸು ಇದೀಗ ಅಧಿಕೃತಗೊಂಡಿದೆ.ಈ ಮೂಲಕ ನಾಡಗೀತೆಯ ಸಮಯ ಮತ್ತು ದಾಟಿ ನಿಗದಿ ಸಂಬಂಧ ಎದ್ದಿದ್ದ ವಿವಾದ ಮುಗಿದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!