Saturday, October 1, 2022
spot_img
Homeಸುದ್ದಿನಿಷೇಧವಾಗುತ್ತಾ ಪಿಎಫ್‌ಐ?

ನಿಷೇಧವಾಗುತ್ತಾ ಪಿಎಫ್‌ಐ?

ದೇಶವ್ಯಾಪಿ ನಡೆದ ಕಾರ್ಯಾಚರಣೆಯ ಮರ್ಮವೇನು?

ಹೊಸದಿಲ್ಲಿ: ಭಯೋತ್ಪಾದನೆ ಚಟುವಟಿಕೆ ಮೂಲಕ ದೇಶಕ್ಕೆ ಕಂಟಕವಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ ಇಂಡಿಯಾ ಸಂಘಟನೆ ನಿಷೇಧವಾಗುತ್ತಾ? ನಿನ್ನೆ ಪಿಎಫ್‌ಐ ವಿರುದ್ಧ ನಡೆದ ಬೃಹತ್‌ ಕಾರ್ಯಾಚರಣೆ ಹೀಗೊಂದು ಸುಳಿವು ನೀಡಿದೆ. ಪಿಎಫ್‌ಐ ನಿಷೇಧಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕಳೆದ ವರ್ಷವೇ ಸರಕಾರ ತಿಳಿಸಿತ್ತು. ಹಿಂದಿನ ಸಿಮಿಯೇ ಪಿಎಫ್‌ಐ ರೂಪದಲ್ಲಿ ಮರುಹುಟ್ಟು ಪಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಸಿಮಿಯನ್ನು ಕೂಡ ಭಯೋತ್ಪಾದಕ ಚಟುವಟಿಕೆ ಅರೋಪದಲ್ಲಿ ನಿಷೇಧಿಸಲಾಗಿತ್ತು. ಪಿಎಫ್‌ಐನ ಹೆಚ್ಚಿನ ಮುಖಂಡರು ಮತ್ತು ಕಾರ್ಯಕರ್ತರು ಹಿಂದೆ ಸಿಮಿಯಲ್ಲಿ ಸಕ್ರಿಯರಾಗಿದ್ದವರೇ.
ರಕ್ತಸಿಕ್ತ ಇತಿಹಾಸ
ದೇಶದ ವಿವಿಧ ಭಾಗಗಲ್ಲಿ ನಡೆದ ಕೋಮು ಹಿಂಸಾಚಾರ, ಮತೀಯ ಸಂಘರ್ಷಗಳು ಹಾಗೂ ಪ್ರತಿಭಟನೆಗಳಲ್ಲಿ ಪಿಎಫ್‌ಐ ನೆರಳು ಕಾಣಿಸಿಕೊಂಡಿದೆ. ಇದು ಅಕ್ರಮ ಹಣ ವರ್ಗಾವಣೆ ವ್ಯವಹಾರವನ್ನೂ ನಡೆಸುತ್ತಿದೆ. ವಿದೇಶಗಳಿಂದ ಸಂಘಟನೆಗೆ ಕೋಟಿಗಟ್ಟಲೆ ದೇಣಿಗೆ ಹರಿದು ಬರುತ್ತಿರುವ ಗುಮಾನಿ ಇದೆ. ಇದನ್ನು ಪತ್ತೆ ಹಚ್ಚುವ ಸಲುವಾಗಿಯೇ ಇದೀಗ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಜತೆಗೆ ಜಾರಿ ನಿರ್ದೇಶನಾಲಯ ಕೈಜೋಡಿಸಿದೆ.
2006ರಲ್ಲಿ ಕೇರಳದಲ್ಲಿ ಸ್ಥಾಪನೆಯಾದ ಪಿಎಫ್‌ಐಯ ಮೊದಲ ಹೆಸರು ನ್ಯಾಷನಲ್‌ ಡೆವಲಪ್‌ಮೆಂಟ್‌ ಫ್ರಂಟ್‌ ಎಂದಾಗಿತ್ತು. ಕೇರಳದಲ್ಲಿ ಮತಾಂತರ, ಉಗ್ರ ಸಂಘಟನೆಗೆ ಯುವಕರ ಸೇರ್ಪಡೆ, ಹಿಂಸಾತ್ಮಕ ಪ್ರತಿಭಟನೆಗಳು, ಕೊಲೆ, ಅಪಹರಣ, ಲವ್‌ ಜಿಹಾದ್‌ ಮುಂತಾದ ಅಪರಾಧ ಕೃತ್ಯಗಳನ್ನು ನಡೆಸಿದ ಆರೋಪ ಪಿಎಫ್‌ಐ ಕಾರ್ಯಕರ್ತರ ಮೇಲಿದೆ. ಇಡೀ ಪಿಎಫ್‌ಐ ಕಿರು ಇತಿಹಾಸ ರಕ್ತಸಿಕ್ತವಾಗಿದೆ. ಕೇರಳದಲ್ಲಿ ಕಾಲೇಜು ಉಪನ್ಯಾಸಕರೊಬ್ಬರ ಕೈ ಕಡಿದು ಹಾಕಿದ್ದು ಪಿಎಫ್‌ಐ ಕಾರ್ಯಕರ್ತರು. ಇದು ಜಗತ್ತಿನಾದ್ಯಂತ ಸುದ್ದಿಯಾದ ಘಟನೆ.
ಪೌರತ್ವ ಕಾಯಿದೆ ತಿದ್ದುಪಡಿ ವೇಳೆ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ, 2020ರ ದಿಲ್ಲಿ ಗಲಭೆಗೆ ಹಣಕಾಸಿನ ನೆರವು, ಲಖನೌನಲ್ಲಿ ಮಪತ್ತೆಯಾದ ಹಣ ಅಕ್ರಮ ವರ್ಗಾವಣೆ ಹೀಗೆ ಹಲವು ಪ್ರಕರಣಗಳಲ್ಲಿ ಪಿಎಫ್‌ಐ ಕೈವಾಡವಿರುವುದು ತಿಳಿದು ಬಂದಿದ್ದು ಈ ಪೈಕಿ ಹಣಕಾಸಿನ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ
ಹಿಜಾಬ್‌ ಹೋರಾಟಕ್ಕೆ ಕುಮ್ಮಕ್ಕು
ಉಡುಪಿ ಸರಕಾರಿ ಕಾಲೇಜಿನಲ್ಲಿ ಶುರುವಾಗಿ ಇಡೀ ದೇಶಕ್ಕೆ ವ್ಯಾಪಿಸಿದ ವಿದ್ಯಾರ್ಥಿನಿಯರ ಹಿಜಾಬ್‌ ಹೋರಾಟದ ಹಿಂದಿನ ರೂವಾರಿ ಪಿಎಫ್‌ಐ ಎಂದು ಸರಕಾರ ಹೇಳುತ್ತಿದೆ.
ಇಂದು ಕೇರಳದಲ್ಲಿ ಬಂದ್‌
ದೇಶಾದ್ಯಂತ ಗುರುವಾರ ಪಿಎಫ್‌ಐ ವಿರುದ್ಧ ನಡೆದಿರುವ ಕಾರ್ಯಚರಣೆಯನ್ನು ಪ್ರತಿಭಟಿಸಿ ಪಿಎಫ್‌ಐ ಇಂದು ಕೇರಳ ಬಂದ್‌ಗೆ ಕರೆ ನೀಡಿದೆ. ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿರುವ ಬಿಜೆಪಿ ಸರಕಾರ ಮುಸ್ಲಿಮರನ್ನು ದಮನಿಸಲು ಪಿಎಫ್‌ಐ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಈ ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ. ನಿನ್ನೆಯ ದಾಳಿಯಲ್ಲಿ 100ಕ್ಕೂ ಅಧಿಕ ನಾಯಕರನ್ನು ಬಂಧಿಸಿ, ಭಾರಿ ಪ್ರಮಾಣದ ದಾಖಲೆ, ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ, ಮಂಗಳೂರು ಸೇರಿ ಹಲವೆಡೆ ಕಾರ್ಯಾಚರಣೆ ವಿರೋಧಿಸಿ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!