ಬೆಂಗಳೂರು: ಸರ್ಕಾರಕ್ಕೆ ತೀವ್ರ ಮುಜುಗರ ತಂದಿರುವ ಸಿಎಂ ಬೊಮ್ಮಾಯಿ ಅವರ ಫೋಟೊ ಜತೆ `ಪೇ ಸಿಎಂ’ ಎಂಬ ಪೋಸ್ಟರ್ ಅಂಟಿಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಸಿಬ್ಬಂದಿ, ಕಾರ್ಯಕರ್ತರನ್ನು ಮಧ್ಯರಾತ್ರಿ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.
ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾದ ಮಾಜಿ ಮುಖ್ಯಸ್ಥ ಬಿ. ಆರ್. ನಾಯ್ಡು ಅವರನ್ನು ವಸಂತನಗರದಲ್ಲಿರುವ ಮನೆಯಿಂದ ನಸುಕಿನ ಜಾವ 2 ಗಂಟೆಗೆ ನಾಲ್ವರು ಪೊಲೀಸರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು, ಭಯಭೀತರಾದ ಅವರ ಪತ್ನಿ ಕೆಪಿಸಿಸಿ ಸಾಮಾಜಿಕ ಮಾಧ್ಯಮ ತಂಡಗಳಿಗೆ ಮತ್ತು ಕಾಂಗ್ರೆಸ್ ನಾಯಕರಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ.
ಕಾಂಗ್ರೆಸ್‌ನ ಮತ್ತೊಬ್ಬ ಸಾಮಾಜಿಕ ಮಾಧ್ಯಮ ಸಂಪನ್ಮೂಲ ವ್ಯಕ್ತಿ ಕಾಂಗ್ರೆಸ್ ಮುಖಂಡ ಡಿ.ಎ. ಗೋಪಾಲ್ ಅವರ ಪುತ್ರ ಡಿ.ಎ. ಗಗನ್ ಯಾದವ್ ಮತ್ತು ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಸೋದರಳಿಯನ್ನನು ಕೆ.ಆರ್. ಪುರಂನಲ್ಲಿರುವ ಅವರ ನಿವಾಸದಿಂದ ಪೊಲೀಸರು ಸದಾಶಿವನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಕೆಪಿಸಿಸಿ ಅಧಿಕೃತ ವಾಟ್ಸಾಪ್ ಗ್ರೂಪ್ 2.14ಕ್ಕೆ ವರ್ಚುವಲ್ ಎಸ್‌ಒಎಸ್ ಅನ್ನು ಬಿಡುಗಡೆ ಮಾಡಿ, ಪ್ರೀತಿಯ ಮಾಧ್ಯಮದವರೆ ಈಗ ಮಧ್ಯರಾತ್ರಿ 2 ಗಂಟೆ ಮೀರಿದೆ. ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಮಾಜಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸರು ಕರೆದೊಯ್ದರು. ಮಾಧ್ಯಮ ಪ್ರತಿನಿಧಿಗಳು ಹೈಗ್ರೌಂಡ್ಸ್ ಬಳಿ ಬನ್ನಿ, ಅವರ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಸಹಕರಿಸಿ ಎಂದು ಕೋರಿಕೊಳ್ಳಲಾಗಿದೆ.
ಇದಕ್ಕೂ ಮುನ್ನ ನಿನ್ನೆ ಹಗಲು ಈ ಪೋಸ್ಟರ್ ಬಗ್ಗೆ ಮಾತನಾಡಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ, ‘ಪೇ ಸಿಎಂ’ ಪೋಸ್ಟರ್ ಅಂಟಿಸಿದವರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆಎಂದು ಹೇಳಿದ್ದರು. ಪ್ರಕರಣಗಳನ್ನು ನಗರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಲಾಗಿದೆ.
ಎಲ್ಲಾ ಡಿಸಿಪಿಗಳಿಗೆ ತಮ್ಮ ತಮ್ಮ ವಿಭಾಗಗಳಲ್ಲಿ ಇಂತಹ ಪೋಸ್ಟರ್‌ಗಳನ್ನು ನೋಡಿ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿರುವುದಾಗಿ ಆಯುಕ್ತರು ತಿಳಿಸಿದ್ದರು. ನಿನ್ನೆ ಬೆಳಗ್ಗೆ ಹೈಗ್ರೌಂಡ್ಸ್ ಪೊಲೀಸರು ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಸದಾಶಿವನಗರ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಲ್ಲಾ ಮೂರು ಪೊಲೀಸ್ ಠಾಣೆಗಳು ಕೇಂದ್ರ ವಿಭಾಗದ ಅಡಿಯಲ್ಲಿ ಬರುತ್ತವೆ. ಸಂಬಂಧಪಟ್ಟ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ದೂರಿನ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪೇಟಿಎಂ ಮಾದರಿಯಲ್ಲಿ ಪೇಸಿಎಂ ಪೋಸ್ಟರ್‌ಗಳನ್ನು ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಬಸ್ ಶೆಲ್ಟರ್‌ಗಳಲ್ಲಿ, ನಿರ್ಮಾಣ ಸ್ಥಳದಲ್ಲಿ ಹಾಕಲಾಗಿತ್ತು. ಮೇಖ್ರಿ ವೃತ್ತ, ಅರಮನೆ ರಸ್ತೆ, ಬಾಳೇಕುಂದ್ರಿ ವೃತ್ತ ಮತ್ತಿತರ ಕಡೆ ಹಾಕಲಾಗಿದ್ದ ಬಹುತೇಕ ಪೋಸ್ಟರ್‌ಗಳನ್ನು ಪೌರಕಾರ್ಮಿಕರು ತೆಗೆದಿದ್ದಾರೆ.
ಪೇ ಸಿಎಂ ಪೋಸ್ಟರ್: ಮಧ್ಯರಾತ್ರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ವಿಚಾರಣೆ
