Saturday, October 1, 2022
spot_img
Homeಸುದ್ದಿಬೆಳಕು ಹರಿಯುವ ಮೊದಲೇ ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲೆ ಎನ್‌ಐಎ ದಾಳಿ

ಬೆಳಕು ಹರಿಯುವ ಮೊದಲೇ ಪಿಎಫ್‌ಐ, ಎಸ್‌ಡಿಪಿಐ ಕಚೇರಿಗಳ ಮೇಲೆ ಎನ್‌ಐಎ ದಾಳಿ

ನಸುಕಿನ 3.30ಕ್ಕೆ ಕಾರ್ಯಾಚರಣೆ ಶುರು

ಮಂಗಳೂರು: ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಗುಮಾನಿಯಲ್ಲಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ರಾಜಕೀಯ ಮುಖವಾಗಿರುವ ಎಸ್‌ಡಿಪಿಐಯ ಮಂಗಳೂರು ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡ ಇಂದು ಬೆಳಕು ಹರಿಯುವ ಮೊದಲೇ ದಾಳಿ ಮಾಡಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ.
ಮಂಗಳೂರು ನಗರದ ಸುತ್ತಮುತ್ತ ಇರುವ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ನೆಲ್ಲಿಕಾಯಿ ರಸ್ತೆ, ಬಜ್ಪೆ, ಕುಳಾಯಿ, ಕಾವೂರು ಮತ್ತಿತರೆಡೆ ಏಕಕಾಲದಲ್ಲಿ ದಾಳಿಯಾಗಿದ್ದು, ಈ ಕಾರ್ಯಾಚರಣೆಯನ್ನು ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಪ್ರಬಲವಾಗಿ ಪ್ರತಿಭಟಿಸಿದ್ದಾರೆ. ದಾಳಿ ವೇಳೆ ಇಬ್ಬರು ವಶವಾಗಿದ್ದಾರೆ ಎಂದು ವರದಿಯಾಗಿದೆ.
ನಸುಕಿನ 3.30ರ ಹೊತ್ತಿಗೆ ದಾಳಿ ಕಾರ್ಯಾಚರಣೆ ಶುರುವಾಗಿದೆ. ನೆಲ್ಲಿಕಾಯಿ ರಸ್ತೆಯನ್ನು ಬ್ಲಾಕ್‌ ಮಾಡಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅರೆ ಮೀಸಲು ಪೊಲೀಸ್‌ ಪಡೆ ಸಹಿತ ಬಿಗು ಪೊಲೀಸ್‌ ಬಂದೋಬಸ್ತಿನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಮಂಗಳೂರಿನಲ್ಲಿ ಭಾರೀ ಪ್ರತಿಭಟನೆ: ರಾಷ್ಟ್ರೀಯ ತನಿಖಾ ದಳ, ಇಡಿ ದಾಳಿ, ಶೋಧಕಾರ್ಯವನ್ನು ಖಂಡಿಸಿ ಕರಾವಳಿ ಜಿಲ್ಲೆಯ ನಗರ ಮಂಗಳೂರಿನಲ್ಲಿ ಪಿಎಫ್ಐ, ಎಸ್ ಡಿಪಿಐ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ 100ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳ ಕಚೇರಿಗಳು, ಮುಖಂಡರ ನಿವಾಸಗಳ ಮೇಲೆ ದಾಳಿ ನಡೆದಿದೆ. ಎನ್​ಐಎ ದಾಳಿ ಖಂಡಿಸಿ ಪಿಎಫ್​ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೆಲ್ಲಿಕಾಯಿ ರಸ್ತೆಯಲ್ಲಿ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಅರೆಮೀಸಲು ಪಡೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.

ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್​ಐ ಕಚೇರಿ ) ಮೇಲೆ ಗುರುವಾರ ನಸುಕಿನ 3.30ರ ವೇಳೆಯಲ್ಲಿ ದಾಳಿ ನಡೆಸಿದೆ. ಶಸ್ತ್ರಸಜ್ಜಿತ ಕೇಂದ್ರೀಯ ಪಡೆಗಳೊಂದಿಗೆ ಸ್ಥಳಕ್ಕೆ ಬಂದಿರುವ ಅಧಿಕಾರಿಗಳು ಇದೀಗ ಕಚೇರಿಗೆ ಪ್ರವೇಶಿಸಿದ್ದಾರೆ. ಕೇರಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಇರುವ ಎಸ್​ಡಿಪಿಐ ಕಚೇರಿಗಳ ಮೇಲೆಯೂ ದಾಳಿ ನಡೆದಿದೆ. ಎಸ್​ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕರ್ ಕುಳಾಯಿ ಸೋದರನ ಮನೆಗೂ ಅಧಿಕಾರಿಗಳು ಪ್ರವೇಶಿಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್​ಐಎ ತನಿಖೆ ನಡೆಸುತ್ತಿದೆ. ಮಂಗಳೂರಿನ ಸ್ಥಳೀಯ ಪೊಲೀಸರು ಸಹ ರಸ್ತೆಯಲ್ಲಿ ಉಪಸ್ಥಿತರಿದ್ದು ಭದ್ರತೆ ಒದಗಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರ ರಾತ್ರಿ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಕಾರ್ಯಕರ್ತರ ತೀವ್ರ ಒತ್ತಾಯದ ನಂತರ ಪ್ರಕರಣದ ತನಿಖೆಯನ್ನು ಎನ್ಐಎ ಗೆ ವಹಿಸಲಾಯಿತು. ತನಿಖೆ ಆರಂಭಿಸಿರುವ ಅಧಿಕಾರಿಗಳು ಕಳೆದ 6ನೇ ತಾರೀಖು ಸುಳ್ಯ ಹಾಗೂ ಪುತ್ತೂರು ತಾಲ್ಲೂಕಿನ 32 ಕಡೆಗಳಲ್ಲಿ ಮನೆಗಳು ಹಾಗು ಇತರೆ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಬಂಧಿತರಾಗಿರುವ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕಾರ ನೀಡಿದವರ ವಿಚಾರಣೆಯನ್ನೂ ಎನ್​ಐಎ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಇದುವರೆಗೆ 4 ಕಡೆ ಎನ್ಐಎ ದಾಳಿ ನಡೆದಿದೆ. ರಿಚ್ ಮಂಡ್ ಟೌನ್‌ನ ಅಪಾರ್ಟ್‌ಮೆಂಟ್‌ವೊಂದರ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಯುತ್ತಿದೆ. ಪಿಎಫ್ಐ ಸಂಘಟನೆ ಕಾರ್ಯದರ್ಶಿಯ ನಿವಾಸ ಮೇಲೆ ದಾಳಿ ನಡೆಯುತ್ತಿದೆ.
ಕೇರಳದಲ್ಲಿ ಎನ್ಐಎ ಮತ್ತು ಜಾರಿ ನಿರ್ದೇಶನಾಲಯ ಪಿಎಫ್ಐ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಕಚೇರಿ, ನಿವಾಸವಿರುವ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ದಾಳಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here

Most Popular

error: Content is protected !!