Sunday, October 2, 2022
spot_img
Homeಸುದ್ದಿಪಿಎಫ್‌ಐ, ಎಸ್‌ಡಿಪಿಐ ವಿರುದ್ಧ ಬೃಹತ್‌ ಕಾರ್ಯಾಚರಣೆ

ಪಿಎಫ್‌ಐ, ಎಸ್‌ಡಿಪಿಐ ವಿರುದ್ಧ ಬೃಹತ್‌ ಕಾರ್ಯಾಚರಣೆ

100ಕ್ಕೂ ಅಧಿಕ ಮುಖಂಡರ ಬಂಧನ; ದೇಶಾದ್ಯಂತ ನಡೆಯುತ್ತಿದೆ ದಾಳಿ

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ನಸುಕಿನ ಜಾವದಿಂದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಮತ್ತು ಅದರ ರಾಜಕೀಯ ಮುಖವಾಗಿರುವ ಎಸ್‌ಡಿಪಿಐ ವಿರುದ್ಧ ದೇಶಾದ್ಯಂತ ಬೃಹತ್‌ ಕಾರ್ಯಾಚರಣೆ ಪ್ರಾರಂಭಿಸಿದ್ದು, 100ಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿದೆ ಎಂದು ವರದಿಯಾಗಿದೆ. ಮಂಗಳೂರು, ಬೆಂಗಳೂರು, ತೆಲಂಗಾಣ ಸೇರಿದಂತೆ ಪ್ರಮುಖ ನಗರಗಳಲ್ಲಿ ನಸುಕಿನ 3 ಗಂಟೆಯಿಂದಲೇ ಕಾರ್ಯಾಚರಣೆ ಶುರುವಾಗಿದೆ. ತಮಿಳುನಾಡು, ಕೇರಳ ಹಾಗೂ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿ ತನಿಖೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಸುಮಾರು 10 ರಾಜ್ಯಗಳಲ್ಲಿ ನಡೆಸಲಾದ ದಾಳಿಯಲ್ಲಿ 100 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ನಗರದಲ್ಲಿನ ಪಿಎಫ್ಐ ಹಾಗೂ ಎಸ್‌​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಇಂದು ನಸುಕಿನ ಜಾವ 3.30ರ ಸುಮಾರಿಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಎನ್‌ಐಎ ದಾಳಿ ಖಂಡಿಸಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಂತೆ ಪಿಎಫ್ಐ ಕಾರ್ಯಕರ್ತರು ಅವರ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು. ಮಂಗಳೂರು ನಗರದಲ್ಲಿ ಹಲವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಎನ್‌ಐಎಯ ಇಲ್ಲಿಯವರೆಗಿನ ಅತಿದೊಡ್ಡ ತನಿಖೆ ಪ್ರಕ್ರಿಯೆಯಲ್ಲಿ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ರೂಪಿಸುವ ವಿವಿಧ ವ್ಯಕ್ತಿಗಳ ನಿವಾಸ ಮತ್ತು ಅಧಿಕೃತ ಕಚೇರಿಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಹಲವು ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲಿ ಎನ್‌ಐಎ ತನಿಖಾ ಸಂಸ್ಥೆಯು ಪಿಎಫ್‌ಐ ಪ್ರಕರಣದಲ್ಲಿ ತೆಲಂಗಾಣ, ಆಂಧ್ರಪ್ರದೇಶದ 40 ಸ್ಥಳಗಳಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿತ್ತು.
1992ರಲ್ಲಿ ಬಾಬರಿ ಮಸೀದಿ ಧ್ವಂಸ ನಡೆಸಿದ ಬಳಿಕ ಮೂರು ಮುಸ್ಲಿಂ ಸಂಘಟನೆಗಳನ್ನು ವಿಲೀನಗೊಳಿಸಿ 2006ರಲ್ಲಿ PFI ಸಂಘಟನೆಯನ್ನು ಪ್ರಾರಂಭಿಸಲಾಯಿತು. ಕೇರಳದಲ್ಲಿ ಈ ಸಂಘಟನೆ ಆರಂಭಗೊಂಡಿತು. ಸದ್ಯ ಪಿಎಫ್‌ಐ 22 ರಾಜ್ಯಗಳಲ್ಲಿ ಘಟಕಗಳನ್ನು ಹೊಂದಿದೆ. ಇದರ ಕೇಂದ್ರ ಕಚೇರಿಯು ಮೊದಲು ಕೇರಳದ ಕೋಝಿಕ್ಕೋಡ್‌ನಲ್ಲಿತ್ತು. ಆದರೆ ತನ್ನ ನೆಲೆಯನ್ನು ವಿಸ್ತರಿಸಿದ ಬಳಿಕ ಅದನ್ನು ದಿಲ್ಲಿಗೆ ಸ್ಥಳಾಂತರಿಸಲಾಯಿತು. ಪಿಎಫ್‌ಐನ ರಾಜ್ಯಾಧ್ಯಕ್ಷ ನಸರುದ್ದೀನ್ ಎಲಮರೋಮ್ ಸಂಘಟನೆಯ ಸಂಸ್ಥಾಪಕ ನಾಯಕರಲ್ಲಿ ಒಬ್ಬರು. ಇದರ ಅಖಿಲ ಭಾರತ ಅಧ್ಯಕ್ಷ ಇ. ಅಬೂಬಕ್ಕರ್ ಕೂಡ ಕೇರಳದವರು.

LEAVE A REPLY

Please enter your comment!
Please enter your name here

Most Popular

error: Content is protected !!