Saturday, October 1, 2022
spot_img
Homeಸುದ್ದಿದೇವರ ಮೂರ್ತಿ ಮುಟ್ಟಿದ ದಲಿತ ಬಾಲಕನ ಹೆತ್ತವರಿಗೆ 60 ಸಾವಿರ ರೂ. ದಂಡ

ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕನ ಹೆತ್ತವರಿಗೆ 60 ಸಾವಿರ ರೂ. ದಂಡ

ಕೋಲಾರದಲ್ಲಿ ನಡೆದ ಅಮಾನವೀಯ ಘಟನೆ; 8 ಮಂದಿ ವಿರುದ್ಧ ಕೇಸು

ಕೋಲಾರ: ದೇವರ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಮೂರ್ತಿ ಮುಟ್ಟಿರುವ ಕಾರಣಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಎಂಟು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಗ್ರಾಮದ ಶೊಭಾ ಹಾಗೂ ರಮೇಶ್ ದಂಪತಿಯ 15 ವರ್ಷದ ಪುತ್ರ ಚೇತನ್ 10 ದಿನಗಳ ಹಿಂದೆ ಗ್ರಾಮದ ಭೂತಮ್ಮ‌ ದೇವರ ಮೂರ್ತಿ ಮೆರವಣಿಗೆ ವೇಳೆ ದೇವರ ಉತ್ಸವ ಮೂರ್ತಿಯನ್ನು ಮುಟ್ಟಿದ್ದಾನೆ.
ಇದರಿಂದ ಮೇಲ್ಜಾತಿ ಮಂದಿ ಆಕ್ರೋಶಗೊಂಡು ದೇವರ ಮೂರ್ತಿಯನ್ನು ಶುಚಿಗೊಳಿಸಬೇಕು, ಇದಕ್ಕಾಗಿ 60 ಸಾವಿರ ದಂಡ ಕಟ್ಟಬೇಕು ಎಂದಿದ್ದಾರೆ, ಬಾಲಕನ ತಾಯಿ ಶೋಭ ತಮ್ಮ ಬಳಿ ನೀಡಲು ಅಷ್ಟೊಂದು ಹಣವಿಲ್ಲ ಎಂದು ಅಸಹಾಯಕತೆ ತೋಡಿಕೊಂಡಾಗ ಹಣ ನೀಡದಿದ್ದ ಊರು ಬಿಟ್ಟು ಹೋಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇದರಿಂದ ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಜಿಲ್ಲಾಧಿಕಾರಿ ವೆಂಕಟ್ ರಾಜ ಮತ್ತುಎಸ್ ಪಿ. ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ\ ಬಾಲಕನ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ನೀಡದಂತೆ ಎಚ್ಚರಿಸಿದ್ದಾರೆ.
ಸೆಪ್ಟಂಬರ್ 8 ರಂದು ಘಟನೆ ನಡೆದಿದ್ದು, ವಿಷಯವನ್ನು ಯಾರಿಗೂ ತಿಳಿಸದಂತೆ ಗ್ರಾಮಸ್ಥರು ಬಾಲಕನ ಕುಟುಂಬಕ್ಕೆ ತಾಕೀತು ಮಾಡಿದ್ದರು. ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಂದೇಶ್, ಬಾಲಕನ ಕುಟುಂಬದಿಂದ ದಂಡ ನೀಡುವಂತೆ ಒತ್ತಾಯಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶೋಭಾ ಅವರು ಮಾಸ್ತಿ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಉಳ್ಳೇರಹಳ್ಳಿ ನಿವಾಸಿಗಳಾದ ನಾರಾಯಣಸ್ವಾಮಿ, ರಮೇಶ್, ನಾರಾಯಣಸ್ವಾಮಿ (ಮಾಜಿ ಜಿ.ಪಂ ಸದಸ್ಯ), ವೆಂಕಟೇಶಪ್ಪ, ಕೊಟ್ಟೆಪ್ಪ, ಚಲಪತಿ, ಮೋಹನ್ ರಾವ್ (ಅರ್ಚಕ್) ಮತ್ತು ಚಿನ್ನಯ್ಯ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!