ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಲು ಇದ್ದ ತೊಡಕು ನಿವಾರಣೆ

ಯೋಜನಾ ಪ್ರಾಧಿಕಾರದ ಕಿರಿಕಿರಿಯಿಂದ ಜನತೆಗೆ ರಿಲೀಫ್‌

ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ಯೋಜನಾ ಪ್ರಾಧಿಕಾರದ ನಿಯಮದಿಂದಾಗಿ ಕಟ್ಟಡ ನಿರ್ಮಿಸಲು ಇದ್ದ ತೊಡಕು ಇದೀಗ ನಿವಾರಣೆಯಾಗಿದೆ. ಯೋಜನಾ ಪ್ರಾಧಿಕಾರ ಏಕನಿವೇಶನ ನೀಡದಿದ್ದ ಕಾರಣ ಪುರಸಭೆ ಸಾರ್ವಜನಿಕರಿಗೆ ಖಾತೆ ಕೊಡುತ್ತಿರಲಿಲ್ಲ. ಖಾತೆ ಆಗದೇ ಕಟ್ಟಡ ನಿರ್ಮಾಣ ಮಾಡಲು ಅನುಮತಿ ದೊರೆಯುತ್ತಿರಲಿಲ್ಲ. ಹಾಗಾಗಿ ಪುರಸಭಾ ವ್ಯಾಪ್ತಿಯಲ್ಲಿ ಗೃಹ, ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಮತ್ತು ಖಾಲಿ ಜಾಗ ಖರೀದಿ, ಮಾರಾಟಕ್ಕೆ ತೊಡಕಾಗಿತ್ತು.

ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಮಹಾಯೋಜನೆ ಅನುಮೋದನೆಯಾಗುವವರೆಗೆ ಸಾರ್ವಜನಿಕರಿಗೆ ತಾಂತ್ರಿಕ ಅಭಿಪ್ರಾಯ ಮತ್ತು ಕಟ್ಟಡ ಪರವಾನಗಿಯನ್ನು ಸ್ಥಳೀಯ ಪುರಸಭೆಯಿಂದಲೇ ನಿಯಮಾನುಸಾರ ನೀಡಲು ನಗರಾಭಿವೃದ್ಧಿ ಇಲಾಖೆ ಆ. 16ರಂದು ಅನುಮತಿ ನೀಡಿ ಆದೇಶಿಸಿದೆ. ಮಹಾಯೋಜನೆಯನ್ನು ಶೀಘ್ರವಾಗಿ ಸರಕಾರದ ಅನುಮೋದನೆಗೆ ಸಲ್ಲಿಸುವಂತೆಯೂ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಯವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸರಕಾರದ ಹೊಸ ನಿಯಮದಿಂದ ಇದೀಗ ಯೋಜನಾ ಪ್ರಾಧಿಕಾರ ಕಿರಿಕಿರಿಗೆ ಮುಕ್ತಿ ದೊರೆಯಲಿದೆ. ಪುರಸಭೆಯೇ ಒಂದು ನಿಯಮ ಮಾಡಿ ಅಭಿವೃದ್ಧಿ ಶುಲ್ಕ, ಸೆಟ್‌ ಬ್ಯಾಕ್‌, ರಸ್ತೆ, ಪಾರ್ಕಿಂಗ್ ಕುರಿತು ನಿರ್ಣಯ ಕೈಗೊಳ್ಳಬಹುದಾಗಿದೆ. ಕಾರ್ಕಳ ಪುರಸಭೆಯಲ್ಲಿ 300 ಕ್ಕೂ ಅಧಿಕ ಅರ್ಜಿಗಳು ಪ್ರಾಧಿಕಾರದ ಸಮಸ್ಯೆಯಿಂದ ವಿಲೇವಾರಿಯಾಗಿರಲಿಲ್ಲ. ಜಾಗ ಖರೀದಿ, ಮಾರಾಟಕ್ಕೂ ತೊಡಕಾಗಿತ್ತು.

ಫಲಿಸಿತು ಸಚಿವ ಸುನಿಲ್‌ ಕುಮಾರ್‌ ಪ್ರಯತ್ನ
ನಗರ ಯೋಜನಾ ಪ್ರಾಧಿಕಾರದ ಕಾನೂನಿನ ತೊಡಕಿನಿಂದಾಗಿ ಕಳೆದ ಮೂರು ವರ್ಷಗಳಿಂದ ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಕುರಿತು ಹಲವಾರು ಮಂದಿ ಸಚಿವ ಸುನಿಲ್‌ ಕುಮಾರ್‌ ಅವರಿಗೆ ಮನವಿ ಮಾಡಿ, ತಮ್ಮ ಅಳಲು ತೋಡಿಕೊಂಡಿದ್ದರು. ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸಚಿವ ಸುನೀಲ್‌ ಕುಮಾರ್‌ ಅವರು ಸತತವಾಗಿ ಸರಕಾರ ಹಾಗೂ ನಗರಾಭಿವೃದ್ಧಿ ಇಲಾಖೆ ಮೇಲೆ ಒತ್ತಡ ಹೇರಿದ್ದರು. ಸಂಬಂಧಪಟ್ಟವರೊಂದಿಗೆ ನಿರಂತರ ಸಭೆ ನಡೆಸುವ ಮೂಲಕ ಕಾನೂನಿನ ಅಡೆತಡೆ ನಿವಾರಣೆಗೆ ಶ್ರಮಿಸಿದ್ದರು.





























































































































































































































error: Content is protected !!
Scroll to Top