Sunday, October 2, 2022
spot_img
Homeಸುದ್ದಿಕಾರ್ಕಳದ 46 ಸಾವಿರ ಕುಟುಂಬ 5 ಸಾವಿರ ಅಂಗಡಿಗಳಲ್ಲೂ ಸಂಭ್ರಮದಲ್ಲಿ ರಾಷ್ಟ್ರಧ್ವಜ ಹಾರಿಸೋಣ - ಸುನೀಲ್‌...

ಕಾರ್ಕಳದ 46 ಸಾವಿರ ಕುಟುಂಬ 5 ಸಾವಿರ ಅಂಗಡಿಗಳಲ್ಲೂ ಸಂಭ್ರಮದಲ್ಲಿ ರಾಷ್ಟ್ರಧ್ವಜ ಹಾರಿಸೋಣ – ಸುನೀಲ್‌ ಕುಮಾರ್‌

ಕಾರ್ಕಳ : ಕಾರ್ಕಳ ಹೆಬ್ರಿ ಉಭಯ ತಾಲೂಕಿನ 46 ಸಾವಿರ ಮನೆ, 5 ಸಾವಿರ ಅಂಗಡಿಗಳಲ್ಲೂ ರಾಷ್ಟ್ರಧ್ವಜ ರಾರಾಜಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಕಳಕ್ಕೆ ಈಗಾಗಲೇ ಸರಕಾರದಿಂದ 40 ಸಾವಿರ ಧ್ವಜ ಬಂದಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಹೇಳಿದರು.

ಅವರು ಕಾರ್ಕಳ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಅಮೃತ ಮಹೋತ್ಸವ ಆಚರಣೆ ಕುರಿತು ಬಿಜೆಪಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ ರಾಜ್ಯದ ಸ್ವಾತಂತ್ರ್ಯ ಹೋರಾಟ ನಡೆದ 75 ಸ್ಥಳಗಳನ್ನು ಗುರುತಿಸಲಾಗಿದ್ದು ಅಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದಲ್ಲಿ ನಡೆದ ಪ್ರತಿಯೊಂದು ಸ್ವಾತಂತ್ರ್ಯ ಹೋರಾಟಗಳು ಕೂಡ ರೋಮಾಂಚನ. ಕಾರ್ಕಳ ಅನಂತಶಯನ, ಕುಂದಾಪುರದ ಬಸ್ರೂರು, ಮಂಗಳೂರು ಬಾವುಟಗುಡ್ಡೆಯಲ್ಲಿ ಸುಳ್ಯದ ರಾಮೆ ಗೌಡ ನೇತೃತ್ವದಲ್ಲಿ ನಡೆದ ಸಂಗ್ರಾಮ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದವರು ನಡೆಸಿದ ಹೋರಾಟವನ್ನು ಸ್ಮರಿಸಲಾಗುತ್ತಿದೆ ಎಂದು ಸುನೀಲ್‌ ಕುಮಾರ್‌ ಹೇಳಿದರು.

ಆ. 9 ಮತ್ತು 10ರಂದು ಬಿಜೆಪಿ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಮನೆ ಮೇಲೆ ಧ್ವಜ ಹಾರಿಸಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ತಿಳಿಸಿದ ಸುನೀಲ್‌ ಕುಮಾರ್‌ ರಾಷ್ಟ್ರಧ್ವಜ ಖರೀದಿ ಮಾಡಿಯೇ ಹಾರಿಸಬೇಕೆಂದು ಕಿವಿಮಾತು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಅವಕಾಶ ನಮಗೆ ದೊರೆತಿಲ್ಲ. ಆದರೆ, ಇಂದು ಅಮೃತ ಮಹೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುವಂತಹ ಯೋಗ ದೊರೆತಿದೆ ಎಂದು ಹೇಳಿದ ಸುನೀಲ್‌ ಕುಮಾರ್‌ ಜಗತ್ತೆ ಇಂದು ಭಾರತದ ಕಡೆಗೆ ನೋಡುತ್ತಿದೆ. ಉಕ್ರೇನ್‌ ರಷ್ಯಾ ಯುದ್ದದ ಸಂದರ್ಭವೂ ಅವೆರಡು ದೇಶಗಳು ಭಾರತದ ಸಲಹೆ ಪಡೆಯಲು ಮುಂದಾಗಿದ್ದವು. ಈ ಹಿಂದೆ ಅಮೇರಿಕಾ ದೊಡ್ಡಣ್ಣನಂತಿದ್ದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತವೇ ವಿಶ್ವಕ್ಕೆ ದೊಡ್ಡಣ್ಣನಂತಿದೆ ಎಂದರು.

ಮಾಹಿತಿ
ಇದಕ್ಕೂ ಮುನ್ನ ಆರೂರು ತಿಮ್ಮಪ್ಪ ಶೆಟ್ಟಿ ಅವರು ರಾಷ್ಟ್ರಧ್ವಜದ ನೀತಿ ಸಂಹಿತೆ, ಧ್ವಜಾರೋಹಣ, ಅವರೋಹಣ ಹಾಗೂ ರಾಷ್ಟ್ರ ಧ್ವಜದ ಇತಿಹಾಸ, ಆ. 13, 14, 15ರಂದು ನಡೆಸುವ ಹರ್ ಘರ್ ತಿರಂಗ ಆಚರಣೆ ಬಗ್ಗೆ ಮಾಹಿತಿ ನೀಡಿದರು.
ಭಾರತ ಸೇವಾದಳ ಉಡುಪಿ ಜಿಲ್ಲಾಧ್ಯಕ್ಷ ಅಂಡಾರ್ ದೇವಿ ಪ್ರಸಾದ್ ಶೆಟ್ಟಿ, ಕಾರ್ಕಳ ತಾಲೂಕು ಗೌರವಾಧ್ಯಕ್ಷ ನಿತ್ಯಾನಂದ ಪೈ, ಜಿಲ್ಲಾ ಸಂಘಟಕರಾದ ಫಕೀರ್ ಗೌಡ ಹಳಮನಿ ಉಪಸ್ಥಿತರಿದ್ದರು.

ಸನ್ಮಾನ
24 ಗಂಟೆಗಳ ಕಾಲ ಸ್ಯಾಕ್ಸೋಫೋನ್‌ ನುಡಿಸಿ ಸಾಧನೆ ಮಾಡಿರುವ ಬಾಲಕ ಮುದ್ರಾಡಿಯ ಪ್ರೀತಂ ದೇವಾಡಿಗ ಅವನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್, ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯರಾಂ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ್ಯೋತಿ ರಮೇಶ್ ವಂದೇ ಮಾತರಂ ಹಾಡಿದರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ ನಾಯಕ್‌ ಸ್ವಾಗತಿಸಿದರು. ಬಿಜೆಪಿ ಯುವಮೋರ್ಚಾ ತಾಲೂಕು ಅ‍ಧ್ಯಕ್ಷ ಸುಹಾಸ್‌ ಶೆಟ್ಟಿ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!