ಕಾರ್ಕಳ : ಉಡುಪಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಮಳೆಹಾನಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಶನಿವಾರ ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಸಂಭ್ರಮದ ಸ್ವಾತಂತ್ರೋತ್ಸವ
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಬೇಕು. ಉಡುಪಿ ಜಿಲ್ಲೆಯ 4 ಲಕ್ಷ ಹಾಗೂ ದ. ಕ. ಜಿಲ್ಲೆಯ 6 ಲಕ್ಷ ಮನೆ, ಅಂಗಡಿಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ. 9 ರಂದು ಬಾವುಟ ವಿತರಣೆ ನಡೆಯಲಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಕಳೆದ ನಾಲ್ಕೈದು ತಿಂಗಳಿನಿಂದ ಅಮೃತ ಭಾರತಿಗೆ ಕನ್ನಡದಾರತಿ ಮೂಲಕ ಹಲವಾರು ಕಾರ್ಯಕ್ರಮ ನಡೆಯುತ್ತಿದೆ. ಆ. 13ರ ಅನಂತರ 5 ರಂಗಾಯಣದ ಮೂಲಕ ರಾಜ್ಯದ ವಿವಿಧೆಡೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟ ಕುರಿತು ಒಂದೊಂದು ಗಂಟೆಯ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ಬಲಾತ್ಕಾರದ ಅಪ್ಪುಗೆ
ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಆಲಿಂಗನದ ಬಗ್ಗೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್ ಯಾರದೋ ಒತ್ತಾಯಕ್ಕೆ ಆಲಿಂಗನ ಮಾಡಿಕೊಂಡಿದ್ದಾರೆ. ಬಲಾತ್ಕಾರದ ಅಪ್ಪುಗೆ ಆದ ಕಾರಣ ಯಾವಾಗ ಡಿವೊರ್ಸ್ ಆಗುತ್ತೋ ಗೊತ್ತಿಲ್ಲ ಎಂದರು.