ಜೈಪುರ: ರಾಜಸ್ಥಾನದ ಜಲೋರ್ನಲ್ಲಿ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೆಸಾರ್ಟ್ ನಿರ್ಮಿಸಲು ತಮ್ಮ ಆಶ್ರಮದ ಭೂಮಿಯನ್ನು ಬಿಟ್ಟುಕೊಡುವಂತೆ ಬಿಜೆಪಿ ಶಾಸಕರೊಬ್ಬರು ಒತ್ತಡ ಹೇರಿದ್ದ ನಂತರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಿಂದ ಡೆತ್ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಅದರಲ್ಲಿರುವ ಅಂಶಗಳನ್ನು ಬಹಿರಂಗಪಡಿಸಿಲ್ಲ. ಜಲೋರ್ನ ರಾಜಪುರ ಹಳ್ಳಿಯಲ್ಲಿ ಗುರುವಾರ ರಾತ್ರಿ ರವಿನಾಥ್ (60) ಸ್ವಾಮೀಜಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಂತರ, ಪೊಲೀಸರು ಮೃತದೇಹವನ್ನು ಕೆಳಗಿಳಿಸಲು ಆಶ್ರಮದ ಭಕ್ತರು ಅವಕಾಶ ನೀಡಿರಲಿಲ್ಲ, ಸೂಸೈಡ್ ನೋಟ್ನಲ್ಲಿನ ಅಂಶಗಳನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.
ಈ ಮಧ್ಯೆ ಬಿಜೆಪಿ ಶಾಸಕ ಪೂರಾರಾಮ್ ಚೌದರಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಪಾರದರ್ಶಕ ರೀತಿಯಲ್ಲಿ ತನಿಖೆಗೆ ಒತ್ತಾಯಿಸಿದ್ದಾರೆ. ಸ್ವಾಮೀಜಿಗಳ ದೂರಿನ ಆಧಾರದ ಮೇಲೆ ಶಾಸಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಲೋರ್ ಎಸ್ಪಿ ಹರ್ಷವರ್ಧನ್ ಅಗರ್ ವಾಲ್ ತಿಳಿಸಿದ್ದಾರೆ.
