ಪರಿಚಿತರಿಂದಲೇ ಸಂಚು ಮಾಡಿ ಹತ್ಯೆ
ಬೆಂಗಳೂರು: ಬಿಜೆಪಿ ಯುವಮೋರ್ಚಾ ಮುಖಂಡ ಬೆಳ್ಳಾರೆ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ಇಷ್ಟರ ತನಕ ಭಾವಿಸಿದಂತೆ ಹಂತಕರು ಕೇರಳದ ಮತಾಂಧರಲ್ಲ, ಬದಲಾಗಿ ಪ್ರವೀಣ್ಗೆ ಪರಿಚಿತರಾಗಿದ್ದ ಬೆಳ್ಳಾರೆಯವರು ಎನ್ನಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಬೆಂಗಳೂರಿನಲ್ಲಿ ಈ ವಿಚಾರ ತಿಳಿಸಿದ್ದಾರೆ.
ಹಂತಕರು ಕೇರಳದವರಲ್ಲ ಸ್ಥಳೀಯರೇ ಆಗಿದ್ದು ತಪ್ಪಿಸಿಕೊಂಡಿರುವ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಓರ್ವ ಸುಳ್ಯ ಮತ್ತು ಇನ್ನೋರ್ವ ಬೆಳ್ಳಾರೆಯವನು ಈ ಕೃತ್ಯ ನಡೆಸಿದ್ದಾರೆ. ಅವರು ಲೊಕೇಶನ್ ಸರ್ಚ್ ಮಾಡಿ ಪೊಲೀಸರು ತಮ್ಮನ್ನು ಬಂಧಿಸದಂತೆ ಮೊಬೈಲ್ಗಳನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಅವರ ಜಾಡು ಪತ್ತೆಹಚ್ಚಲು ಸ್ವಲ್ಪ ಸಮಯ ತಗಲಿದೆ. ಪೊಲೀಸರಿಗೆ ಸಿಗದಂತೆ ಅಡಗಿರುವ ಅವರನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.