ಹೊಸದಿಲ್ಲಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಲ್ಲಿಯಲ್ಲಿ ಶುಕ್ರವಾರ ಭೇಟಿ ಮಾಡಿದ್ದಾರೆ. ತಮ್ಮ ರಾಜ್ಯಕ್ಕೆ ಬಾಕಿ ಇರುವ ಜಿಎಸ್‌ಟಿ ಮೊತ್ತ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಧಾನಿ ಜತೆ ಚರ್ಚಿಸಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಮತಾ ಅವರು ನಾಲ್ಕು ದಿನಗಳ ದಿಲ್ಲಿ ಪ್ರವಾಸದಲ್ಲಿದ್ದಾರೆ. ಆ. 7ರಂದು ನೀತಿ ಆಯೋಗದ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಅವರು ದಿಲ್ಲಿಗೆ ತೆರಳಿದ್ದು, ವಿರೋಧ ಪಕ್ಷದ ಕಾಂಗ್ರೆಸ್ಸೇತರ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಶುಕ್ರವಾರ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೂಡ ಭೇಟಿ ಮಾಡುವುದು ನಿಗದಿಯಾಗಿದೆ.
ಊಹಾಪೋಹ ಸೃಷ್ಟಿಸಿದ ಭೇಟಿ
ಮಮತಾ ಅವರ ಆಪ್ತ ಪಾರ್ಥ ಮುಖರ್ಜಿ ಅವರನ್ನು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ ಕೆಲವೇ ದಿನಗಳಲ್ಲಿ ಮಮತಾ ಮತ್ತು ಪ್ರಧಾನಿ ಭೇಟಿ ನಡೆದಿದೆ. ‘ಹೊಂದಾಣಿಕೆ ಮಾಡಿಕೊಳ್ಳಲಾಗಿದೆ’ ಎಂಬ ಸಂದೇಶ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಮಮತಾ ಬ್ಯಾನರ್ಜಿ ಬಳಸಿಕೊಳ್ಳಲಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಆರೋಪಿಸಿದ್ದಾರೆ.
ಮೋದಿ ಮತ್ತು ಮಮತಾ ಅವರ ಭೇಟಿಗೂ ಮುನ್ನ ಟ್ವೀಟ್ ಮಾಡಿರುವ ಮೇಘಾಲಯದ ಮಾಜಿ ರಾಜ್ಯಪಾಲ ಮತ್ತು ಬಂಗಾಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ತಥಾಗತ ರಾಯ್, ತಮ್ಮ ಮತ್ತು ಪಶ್ಚಿಮ ಬಂಗಾಳ ಸಿಎಂ ನಡುವೆ ಯಾವುದೇ ‘ಹೊಂದಾಣಿಕೆ’ ಇಲ್ಲ ಎಂದು ಜನರಿಗೆ ಮನವರಿಕೆ ಮಾಡುವಂತೆ ಪ್ರಧಾನಿಗೆ ಕೋರಿದ್ದಾರೆ.
ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ವಿರುದ್ಧದ ಇ.ಡಿ ಕ್ರಮಗಳ ಸಮಯದಲ್ಲಿಯೇ ಮಮತಾ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಪ್ರಧಾನಿ ಮೋದಿ – ಮಮತಾ ಮಧ್ಯೆ ಒಳ ಒಪ್ಪಂದ? : ಏನಿದು ಹೊಸ ಚರ್ಚೆ?
