ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ರಾಜ್ಯಕ್ಕೆ ಬಂದು ಹೋದ ಬಳಿಕ ಬಿಜೆಪಿ ಮುಂದಿನ ರಾಜ್ಯಾಧ್ಯಕ್ಷ ಯಾರು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಮುಂದುವರಿಸುವ ಇರಾದೆ ಹೈಕಮಾಂಡಿಗೆ ಇಲ್ಲ ಎನ್ನಲಾಗುತ್ತಿದೆ. ಕರ್ನಾಟಕ ಭೇಟಿ ವೇಳೆ ಅಮಿತ್ ಶಾ ಅವರು ನಳಿನ್ ಜತೆ ಸುದೀರ್ಘ ಮಾತುಕತೆ ನಡೆಸಿರುವುದು ರಾಜ್ಯಾಧ್ಯಕ್ಷರ ಬದಲಾವಣೆಯ ಸೂಚನೆ ಎಂದೇ ಬಣ್ಣಿಸಲಾಗುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರ ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಜೆಪಿ ಹೊಂದಿರುವ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಠಿಣ ಸವಾಲು ಎದುರಾಗಬಹುದು ಎಂದು ಸಮೀಕ್ಷೆ ತಿಳಿಸಿದೆ. ಹಾಗಾಗಿ ಬಿಲ್ಲವ ನಾಯಕ ಸುನೀಲ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಆರ್ಎಸ್ಎಸ್ ಸೂಚಿಸಿದೆ ಎನ್ನಲಾಗಿದೆ.
ನೂತನ ರಾಜ್ಯಾಧ್ಯಕ್ಷರಾಗಲು ಹಲವು ಮಂದಿ ತುದಿಗಾಲಲ್ಲಿ ನಿಂತಿದ್ದರೂ ಈಗಲೂ ಮುಂಚೂಣಿಯಲ್ಲಿರುವುದು ಇಬ್ಬರ ಹೆಸರು ಮಾತ್ರ. ಈ ಪೈಕಿ ಒಬ್ಬರು ಪ್ರಸ್ತುತ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರದ್ದು. ಯಾರೇ ಅಧ್ಯಕ್ಷರಾದರೂ ಬಹಳ ದೊಡ್ಡ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಇದೇ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವುದು ಹೊಸ ರಾಜ್ಯಾಧ್ಯಕರಿಗೆ ಎದುರಾಗುವ ಮೊದಲ ಸವಾಲು. 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಅವಕಾಶಗಳ ಕುರಿತು ಅಮಿತ್ ಶಾ ವರದಿ ಪಡೆದಿದ್ದು,ಇದರಲ್ಲಿ ರಾಜ್ಯಾಧ್ಯಕರ ಬದಲಾವಣೆಯ ಅಂಶವೂ ಸೇರಿದೆ. ಬಿಜೆಪಿ ಸರಕಾರ ಇರುವಾಗಲೇ ಬಿಜೆಪಿ ಕಾರ್ಯಕರ್ತರು ಮತಾಂಧರಿಗೆ ಬಲಿಯಾಗುತ್ತಿರುವ ಬಗ್ಗೆ ಅಮಿತ್ ಶಾ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯ ಅನಂತರ ಕರ್ನಾಟಕ, ವಿಶೇಷವಾಗಿ ಕರಾವಳಿ ಪ್ರದೇಶದ ಪರಿಸ್ಥಿತಿಯ ಬಗ್ಗೆ ಶಾ ಮಾಹಿತಿ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಸಮುದಾಯದ ಮತಗಳನ್ನು ಗಮನದಲ್ಲಿಟ್ಟುಕೊಂಡು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಬಿಲ್ಲವ ಸಮುದಾಯದ ಮತ ಬ್ಯಾಂಕ್ನತ್ತ ಗಮನ ಹರಿಸುವಂತೆ ಸೂಚಿಸಿದ್ದಾರೆ. ಇದೀಗ ಕಾಂಗ್ರೆಸ್ ತಂತ್ರಕ್ಕೆ ಪ್ರತಿಯಾಗಿ ಸುನೀಲ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಒಕ್ಕಲಿಗರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆಯೂ ಚರ್ಚಿಸಲಾಯಿತು. ಆದರೆ ಅದು ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ನಾಯಕರಿಗೆ ಮನವರಿಕೆಯಾಗಲಿಲ್ಲ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಕೂಡ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅಮಿತ್ ಶಾ ಮಾತುಕತೆ ನಡೆಸಿದ್ದು, 2023ರ ವಿಧಾನಸಭೆ ಚುನಾವಣೆ ಎದುರಿಸಲು ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಇತ್ತೀಚಿನ ಘಟನೆಗಳು ವಿಶೇಷವಾಗಿ ಬೊಮ್ಮಾಯಿ ಸರ್ಕಾರದ ವಿರುದ್ಧ ಪಕ್ಷದ ಕಾರ್ಯಕರ್ತರ ಆಕ್ರೋಶ ಮತ್ತು ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆಯ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆಯೂ ಸಿಎಂ ಅವರಿಗೆ ಶಾ ತಿಳಿಸಿದ್ದರು ಎನ್ನಲಾಗಿದೆ.
ಶಾ ಬಂದ ಬಳಿಕ ಮತ್ತೆ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ
Recent Comments
ಕಗ್ಗದ ಸಂದೇಶ
on