Homeರಾಜ್ಯಸಿದ್ದರಾಮೋತ್ಸವಕ್ಕೆ ಎಷ್ಟು ಕೋಟಿ ಸುರಿಯಲಾಗಿದೆ?

Related Posts

ಸಿದ್ದರಾಮೋತ್ಸವಕ್ಕೆ ಎಷ್ಟು ಕೋಟಿ ಸುರಿಯಲಾಗಿದೆ?

ಬೆಂಗಳೂರು : ದಾವಣಗೆರೆಯಲ್ಲಿ ನಿನ್ನೆ ಅದ್ದೂರಿಯಾಗಿ ನಡೆದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಸಿದ್ದರಾಮೋತ್ಸಕ್ಕೆ ಎಷ್ಟು ಕೋಟಿ ಖರ್ಚಾಗಿರಬಹುದು? ಇದು ಸದ್ಯಕ್ಕೆ ಜನರ ತಲೆ ತಿನ್ನುತ್ತಿರುವ ಪ್ರಶ್ನೆ. ಈ ಬಗ್ಗೆ ಕಾಂಗ್ರೆಸ್‌ ಆಗಲಿ, ಸಿದ್ದರಾಮೋತ್ಸವ ಸಮಿತಿಯವರಾಗಲಿ ಯಾವುದೇ ಲೆಕ್ಕ ಪತ್ರ ಬಹಿರಂಗಪಡಿಸದಿದ್ದರೂ ಖಾಸಗಿ ಸಂಸ್ಥೆಯೊಂದು ಎರಡು ತಿಂಗಳಿನಿಂದ ನಡೆದ ತಯಾರಿಯನ್ನೆಲ್ಲ ಅವಲೋಕಿಸಿ ಸುಮಾರು 25 ಕೋಟಿ ರೂಪಾಯಿಯಾದರೂ ಖರ್ಚಾಗಿರಬಹುದು ಎಂದು ಲೆಕ್ಕ ಹಾಕಿದೆ. ಇದು ಸಿದ್ದರಾಮಯ್ಯನವರ ಅಭಿಮಾನಿಗಳು ನಡೆಸಿದ ಕಾರ್ಯಕ್ರಮವಾಗಿದ್ದರೂ ಖರ್ಚಿನ ಮೂಲ ಯಾವುದು ಎಂದು ಯಾರೂ ಈ ತನಕ ಬಾಯಿ ಬಿಟ್ಟಿಲ್ಲ. ಕಾಂಗ್ರೆಸಿನ ಶ್ರೀಮಂತ ಕುಳ, ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಶಾಸಕ ಜಮೀರ್‌ ಅಹ್ಮದ್‌ ದೊಡ್ಡ ಮೊತ್ತವನ್ನು ಕೊಟ್ಟಿರುವ ಊಹಾಪೋಹಗಳಿವೆ. ಖರ್ಚು ವೆಚ್ಚಗಳ ಬಗ್ಗೆ ಮತ್ತು ರಾಜ್ಯದಲ್ಲಿ ವಿಪರೀತ ಮಳೆಯಿಂದ ಹಾನಿ, ಸಾವು ನೋವು ಸಂಭವಿಸುತ್ತಿರುವ ಸಮಯದಲ್ಲಿ ಆಡಂಬರದ ಉತ್ಸವ ಮಾಡಿರುವುದಕ್ಕೆ ರಾಜಕೀಯ ಟೀಕೆಗಳು ಶುರುವಾಗಿವೆ.
ಸಿದ್ದರಾಮಯ್ಯ ವರ್ಚಸ್ಸಿಗೆ ಕಾರ್ಯಕ್ರಮ ಒಂದಷ್ಟು ಕಳೆ ತಂದು ಕೊಟ್ಟಿದೆಯಾದರೂ ಜತೆಗೆ ವಿಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ಟೀಕಿಸಲು ಉತ್ತಮ ಅಸ್ತ್ರವೂ ಸಿಕ್ಕಿದಂತಾಗಿದೆ. ಸಿದ್ದರಾಮೋತ್ಸವ ಎಂಬುದು ಅಪ್ಪಟ ರಾಜಕೀಯ ಸಮಾವೇಶ. ಈ ಸಮಾವೇಶಕ್ಕೆ ಕೋಟ್ಯಾಂತರ ರೂಪಾಯಿ ಸುರಿಯಲಾಗಿದೆ. ಯಾರದ್ದೋ ದುಡ್ಡಿನಲ್ಲಿ ಸಿದ್ದರಾಮಯ್ಯ ಯಲ್ಲಮ್ಮನ ಜಾತ್ರೆ ಮಾಡಿಕೊಂಡರು ಎಂಬ ಟೀಕೆ ಟಿಪ್ಪಣಿ ವ್ಯಕ್ತವಾಗಿದೆ. ಸಿದ್ದರಾಮೋತ್ಸವ ತಯಾರಿ ಶುರುವಾಗಿದ್ದು ಬರೋಬ್ಬರಿ ಎರಡು ತಿಂಗಳ ಹಿಂದೆ.‌ ಸಿದ್ದರಾಮಯ್ಯನವರ ನಾಲ್ಕು ದಶಕಗಳ ಜೊತೆಗಿನ ಸ್ನೇಹಿತರು, ಆಪ್ತರು ಸಿದ್ದರಾಮೋತ್ಸವ ನಡೆಸಲು ಸ್ವಾಗತ ಸಮಿತಿ ರಚನೆ ಮಾಡಿದರು. ಬೇಕಾದ ಖರ್ಚು ವೆಚ್ಚಗಳನ್ನು ಸಿದ್ದರಾಮಯ್ಯ ಆಪ್ತರೇ ಹೊಂದಿಸಿಕೊಂಡು ಮಾಡಿದ ಖಾಸಗಿ ಕಾರ್ಯಕ್ರಮ ಇದು ಎಂದು ಪ್ರಚಾರ ಮಾಡಲಾಗಿದೆ. ಪಕ್ಷದ ಹೆಸರು ಕೇವಲ ನೆಪ ಮಾತ್ರ. ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲು ಒಂದೊಂದು ತಂಡ ಒಂದೊಂದು ಜವಾಬ್ದಾರಿ ವಹಿಸಿಕೊಂಡಿತ್ತು. ಮಧ್ಯ ಕರ್ನಾಟಕ ಭಾಗವೇ ಸೂಕ್ತ ಅಂತ ಅಂದುಕೊಂಡಾಗ ಹಿಂದೆ ಅಹಿಂದ ಸಮಾವೇಶ ನಡೆಸಿದ್ದ ದಾವಣಗೆರೆಯನ್ನೇ ಆಯ್ಕೆ ಮಾಡಿಕೊಳ್ಳಲಾಯ್ತು. ಇದಕ್ಕೆ ಬೇಕಾದ ಜಾಗ ಒದಗಿಸಿದ್ದು ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್​.ಎಸ್ ಮಲ್ಲಿಕಾರ್ಜುನ್. ಬರೋಬ್ಬರಿ 50 ಎಕರೆ ಜಾಗದಲ್ಲಿ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆಸಿ ಸರಿ ಸುಮಾರು 25 ಕೋಟಿಯಷ್ಟು ವೆಚ್ಚ ಮಾಡಲಾಗಿದೆ.
ವೇದಿಕೆ ನಿರ್ಮಾಣಕ್ಕೆ 25 ಲಕ್ಷ ವೆಚ್ಚವಾಗಿದೆ. ಸ್ಟೇಜ್ ಮುಂಭಾಗದಲ್ಲಿ ಮೂರು ಜರ್ಮನ್ ಟೆಕ್ನಾಲಜಿ ಟೆಂಟ್​ಗಳು, ಎಡ ಬಲಕ್ಕೆ ಜರ್ಮನ್ ಮಾಡೆಲ್ ಟೆಂಟ್ 2 ಕೋಟಿಯಾಗಿದೆ. ಕುರ್ಚಿಗಳಿಗೆ 5.5 ಲಕ್ಷ , 52 ಲಕ್ಷ ಸೌಂಡ್ ಬಾಕ್ಸ್‌ ಹಾಗೂ ಪರಿಕರಗಳಿಗೆ, ಇಟಾಲಿಯನ್ ಎಕೊಸ್ಟಿಕ್ ಸೌಂಡ್‌ಗೆ 35ಲಕ್ಷ ರೂ.,ಸುಮಾರು 7000 ಬಸ್​ಗಳ ವ್ಯವಸ್ಥೆಗೆ 5 ಕೋಟಿ ರೂ. ಖರ್ಚಾಗಿದೆ ಎಂದು ಖಾಸಗಿ ಸಂಸ್ಥೆ ಲೆಕ್ಕ ಹಾಕಿದೆ. ರೂ. 6 ಕೋಟಿ ದೊಡ್ಡ ಮೊತ್ತದ ಹಣ ಖರ್ಚಾಗಿರುವುದು ಊಟೋಪಾಚಾರದ ವ್ಯವಸ್ಥೆಗೆ. 6 ಲಕ್ಷಕ್ಕೂ ಹೆಚ್ಚು ಮಂದಿಯು ಊಟೋಪಚಾರವನ್ನು ಸವಿದರು ಎನ್ನಲಾಗುತ್ತಿದೆ. ಹೊರಗಡೆಯ ಫ್ಲೆಕ್ಸ್, 75 ಅಡಿಯ 7 ಕಟೌಟ್ ಗಳು ಸೇರಿ ಪ್ರಚಾರಕ್ಕೆ 2.5 ಕೋಟಿ, ಎಲ್ಇಡಿ ಸ್ಕ್ರೀನ್​ಗಳ ವ್ಯವಸ್ಥೆಗೆ ಸುಮಾರು 50 ಲಕ್ಷ ರೂ. ಖರ್ಚು ಮಾಡಲಾಗಿದೆ. ಇದಿಷ್ಟೂ ಖರ್ಚು ವೆಚ್ಚಗಳನ್ನು ಸಿದ್ಧರಾಮೋತ್ಸವ ಸಮಿತಿಯೇ ಭರಿಸಿದೆ ಎಂದು ಕಾರ್ಯಕ್ರಮ ಆಯೋಜಿಸಿದ ಸಮಿತಿ ಹೇಳುತ್ತಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!