ಬೆಂಗಳೂರು : ವ್ಯಾಪಕವಾಗಿರುವ ಅಕ್ರಮ ನಡೆದ ಹಿನ್ನೆಲೆಯಲ್ಲಿ ರದ್ದಾಗಿರುವ ಪಿಎಸ್ಐ ಪಿಎಸ್ಐ ಪರೀಕ್ಷೆಯನ್ನು ಹೊಸದಾಗಿ ನಡೆಸಲು ಸರಕಾರ ತೀರ್ಮಾನಿಸಿದೆ. ಶೀಘ್ರದಲ್ಲೇ ಪಿಎಸ್ಐ ನೇಮಕಾತಿ ಪರೀಕ್ಷೆ ಮತ್ತೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳೇ ಭಾಗಿಯಾಗಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ತನ್ನನ್ನು ಭೇಟಿಯಾದ ಪಿಎಸ್ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳಿಗೆ ಈ ಕುರಿತು ಭರವಸೆ ನೀಡಿರುವ ಅವರು, ಮರುಪರೀಕ್ಷೆ ನಡೆಸಲು ಶೀಘ್ರದಲ್ಲೇ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಮರು ಪರೀಕ್ಷೆ ನಡೆಸುವ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಹಿಂದೆ ಪರೀಕ್ಷೆ ಬರೆದಿದ್ದ ಹಾಗೂ ಅಕ್ರಮದಲ್ಲಿ ಭಾಗಿಯಾಗದಿರುವ ಎಲ್ಲ 56,000 ಅಭ್ಯರ್ಥಿಗಳು ಮರು ಪರೀಕ್ಷೆ ಬರೆಯುವ ಅರ್ಹತೆ ಹೊಂದಿದ್ದು, ಯಾವುದೇ ಆತಂಕ ಬೇಡ ಎಂದು ಸಚಿವರು ಭರವಸೆ ನೀಡಿದರು. ಮರು ಪರೀಕ್ಷೆ ನಡೆಸುವುದು ತಡವಾದರೆ ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಭಯ ಬೇಡ. ಪರೀಕ್ಷೆ ತಯಾರಿ ಮುಂದುವರಿಸಿ ಎಂದು ಸಚಿವರು ಕಿವಿಮಾತು ಹೇಳಿದರು.
Recent Comments
ಕಗ್ಗದ ಸಂದೇಶ
on