Homeಅಂಕಣಕಾನೂನು ಕಣಜ : ಸಿವಿಲ್ ದಾವೆಯ ವಿವಿಧ ಹಂತಗಳು ಮತ್ತು ಮಾಡಬೇಕಾದ ಸಿದ್ಧತೆ

Related Posts

ಕಾನೂನು ಕಣಜ : ಸಿವಿಲ್ ದಾವೆಯ ವಿವಿಧ ಹಂತಗಳು ಮತ್ತು ಮಾಡಬೇಕಾದ ಸಿದ್ಧತೆ


ಪ್ರಸ್ತುತ ನ್ಯಾಯ ದಾನದ ವ್ಯವಸ್ಥೆಯ ಪ್ರಕಾರ, ಯಾವುದೇ ಒಂದು ಸಿವಿಲ್ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ವ್ಯಕ್ತಿಯು ಸಿವಿಲ್ ದಾವೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲು ದಾವೆಯ ವಿವಿಧ ಹಂತಗಳನ್ನು ತಿಳಿದುಕೊಳ್ಳುವುದರಿಂದ ದಾವೆ ಹೂಡುವ ವ್ಯಕ್ತಿಯು ಮುಂದಕ್ಕೆ ಯಾವುದೇ ಸಮಸ್ಯೆಗಳು ತನಗೆ ಎದುರಾಗದಂತೆ ಮುಂಜಾಗ್ರತೆ ವಹಿಸಿಕೊಳ್ಳಬಹುದಾಗಿದೆ. ಸಿವಿಲ್ ದಾವೆಗೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ದಾವೆಯನ್ನು ದಾಖಲಿಸುವ ವ್ಯಕ್ತಿಯನ್ನು ವಾದಿ ಎಂಬುದಾಗಿಯೂ ಮತ್ತು ದಾವೆಯ ಎದುರು ಪಕ್ಷಗಾರರನ್ನು ಪ್ರತಿವಾದಿ ಎಂಬುದಾಗಿಯೂ ಕರೆಯಲ್ಪಡುತ್ತಾರೆ. ಪ್ರಥಮವಾಗಿ ವಾದಿಯು ನ್ಯಾಯಾಲಯಕ್ಕೆ ತನ್ನ ದಾವಾ ಪತ್ರದಲ್ಲಿ ತಿಳಿಸಿರುವ ವಿಷಯಗಳಿಗೆ ಪೂರಕವಾದಂತಹ ವಿವಿಧ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಈ ರೀತಿ ದಾವೆಯನ್ನು ಸಲ್ಲಿಸುವ ಮುಂಚಿತವಾಗಿ ಕಕ್ಷಿಗಾರನು ಅಂದರೆ ವಾದಿಯು ತನ್ನ ದಾವೆಗೆ ಸಂಬಂಧಪಟ್ಟ ವಿವಾದಿತ ವಿಚಾರಗಳ ಬಗ್ಗೆ ತನ್ನಲ್ಲಿರುವ ಪ್ರತಿಯೊಂದು ದಾಖಲೆಯನ್ನು ತನ್ನ ವಕೀಲರಿಗೆ ನೀಡಿ ಸಮಾಲೋಚಿಸಿ ದಾವೆ ದಾಖಲು ಮಾಡುವ ಬಗ್ಗೆ ತನ್ನ ಪರವಾಗಿ ಮತ್ತು ವಿರುದ್ಧವಾಗಿ ಇರುವ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಒಂದು ವೇಳೆ ತಾನು ಹೂಡುವ ದಾವೆಯು ಸಮಯ ದಾಟಿದ್ದಲ್ಲಿ ಸಮಯ ವಿಳಂಬ ಕೋರಿಕೆಗೆ ಸೂಕ್ತ ಸಕಾರಣಗಳಿವೆಯೇ? ಮತ್ತು ತಾನು ನ್ಯಾಯಾಲಯದಿಂದ ಕೇಳುವ ಪರಿಹಾರ ಸ್ವರೂಪವು ಕಾನೂನಿನ ನಿಯಮಾನುಸಾರವಾಗಿ ಯಾವ ಕ್ಷೇತ್ರ ವ್ಯಾಪ್ತಿ ಮತ್ತು ಮೌಲ್ಯಿಕ ವ್ಯಾಪ್ತಿ ಮತ್ತು ನ್ಯಾಯಿಕ ವ್ಯಾಪ್ತಿಯ ಪರಿಮಿತಿಯಲ್ಲಿರುತ್ತದೆ ಎಂಬುದಾಗಿಯೂ, ದಾವೆಯ ಪರಿಹಾರಕ್ಕೆ ಅನುಗುಣವಾದ ನ್ಯಾಯಾಲಯದ ಶುಲ್ಕದ ಲೆಕ್ಕಾಚಾರ ಮತ್ತು ವಾದಿಯು ಅಪ್ರಾಪ್ತ ವಯಸ್ಕನಾಗಿದ್ದಲ್ಲಿ ಅಥವಾ ಮತಿಭ್ರಷ್ಟನಾಗಿದ್ದಲ್ಲಿ ಅಥವಾ ಬುದ್ಧಿಭ್ರಮಣೆಯವನಾಗಿದ್ದಲ್ಲಿ ಕಾನೂನಿನ ನಿಯಮಾನುಸಾರವಾಗಿ ಆತನ ಸೂಕ್ತ ಪ್ರತಿನಿಧಿಯ ನೇಮಕಾತಿ ಬಗ್ಗೆ ವಗೈರೆ ವಿಷಯಗಳನ್ನು ವಿವರವಾಗಿ ಸಮಾಲೋಚಿಸಿ ತಿಳಿದುಕೊಳ್ಳಬೇಕು.
ದಾವಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕೂಡಲೇ ನ್ಯಾಯಾಲಯವು ದಾವೆಯನ್ನು ಪರಿಶೀಲಿಸಿ ನೊಂದಣಿ ಮಾಡುವಂತೆ ಆದೇಶ ಮಾಡಬೇಕಾಗುತ್ತದೆ ಮತ್ತು ಆ ನಂತರ ಪ್ರತಿವಾದಿಗಳಿಗೆ ನ್ಯಾಯಾಲಯದಿಂದ ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿ ಕಕ್ಷಿಗಾರರ ಹಾಜರಾತಿಗೆ ದಿನವನ್ನು ನಿಗದಿಸಲಾಗುತ್ತದೆ. ಪ್ರತಿವಾದಿ ನ್ಯಾಯಾಲಯಕ್ಕೆ ಹಾಜರಾದ ನಂತರ ದಾವೆಗೆ ಸಂಬಂಧಪಟ್ಟ ವಿಚಾರದ ಬಗ್ಗೆ ತಮ್ಮ ಲಿಖಿತ ಹೇಳಿಕೆಯನ್ನು ಮತ್ತು ತಮ್ಮಲ್ಲಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನ್ಯಾಯಾಲಯವು ಪ್ರತಿವಾದಿಗೆ ಸೂಕ್ತ ಸಮಯಾವಕಾಶವನ್ನು ನೀಡಿ, ಲಿಖಿತ ಹೇಳಿಕೆಯನ್ನು ನ್ಯಾಯಾಲಯವು ಸ್ವೀಕರಿಸಿದ ನಂತರ ದಾವೆಗೆ ಸಂಬಂಧಪಟ್ಟ ವಿವಾದದ ಕುರಿತು ವಿವಾದಾಂಶಗಳ ರಚಿಸಿ ಆ ನಂತರ ದಾವೆಯ ವಿಚಾರಣೆಗೆ ದಿನವನ್ನು ನಿರ್ಧರಿಸಲಾಗುತ್ತದೆ. ಪಕ್ಷಗಾರರ ಮತ್ತು ಅವರ ಪರ ಸಾಕ್ಷಿಗಳ ವಿಚಾರಣೆ ಮುಗಿದ ನಂತರ ನ್ಯಾಯಾಲಯವು ಉಭಯ ಪಕ್ಷಗಾರರ ಪರ ವಕೀಲರ ವಾದ ವಿವಾದಗಳನ್ನು ಆಲಿಸಿ ದಾವೆಯ ಬಗ್ಗೆ ಸೂಕ್ತ ತೀರ್ಪು ನೀಡಬೇಕಾಗುತ್ತದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Latest Posts

error: Content is protected !!