Homeಸ್ಥಳೀಯ ಸುದ್ದಿವಿನಾಶಕಾರಿ ಕೈಗಾರಿಕೆಗಳು ಬೇಡವೇ ಬೇಡ : ನೆಲ್ಲಿಗುಡ್ಡೆ ಪರಿಸರ ಹೋರಾಟ ಸಮಿತಿ

Related Posts

ವಿನಾಶಕಾರಿ ಕೈಗಾರಿಕೆಗಳು ಬೇಡವೇ ಬೇಡ : ನೆಲ್ಲಿಗುಡ್ಡೆ ಪರಿಸರ ಹೋರಾಟ ಸಮಿತಿ

ಕಾರ್ಕಳ : ಮಿಯ್ಯಾರು ಗ್ರಾಮದ ವಾರ್ಡ್ ಸಂಖ್ಯೆ 6ರ ನೆಲ್ಲಿಗುಡ್ಡೆ ಜನವಸತಿ ಪ್ರದೇಶದಲ್ಲಿರುವ ಕೈಗಾರಿಕಾ ಪ್ರಾಂಗಣದಲ್ಲಿ ನಿವೇಶನ ಸಂಖ್ಯೆ 12, 18, 19 ರಲ್ಲಿ ಆರಂಭಿಸಲು ಉದ್ದೇಶಿಸಿರುವ ಕ್ಯಾಶ್ಯು ಶೆಲ್‌ ಮತ್ತು ಶೆಲ್ ಕೇಕ್ ಘಟಕದಿಂದ ಪರಿಸರ ಹಾನಿಗೀಡಾಗಲಿದೆ. ವಿನಾಶಕಾರಿ ಕೈಗಾರಿಕೆಗಳು ನಮ್ಮೂರಿಗೆ ಬೇಡವೇ ಬೇಡ ಎಂದು ನೆಲ್ಲಿಗುಡ್ಡೆ ಪರಿಸರ ಉಳಿಸಿ ಹೋರಾಟ ಸಮಿತಿ ಆಗ್ರಹಿಸಿದೆ.
ಕಾರ್ಕಳ ಪ್ರಕಾಶ್ ಹೊಟೇಲ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶೇಖ್ ಶಬ್ಬೀರ್, ಕೈಗಾರಿಕಾ ಪ್ರದೇಶ ಸ್ಥಾಪಿಸಲು ಕೂಡ ಯೋಗ್ಯವಲ್ಲದ ಸ್ಥಳ ಇದಾಗಿದೆ. ಕೈಗಾರಿಕಾ ಪ್ರಾಂಗಣಕ್ಕೆ ಹೊಂದಿಕೊಂಡು ಸುಮಾರು 450 ಕ್ಕೂ ಅಧಿಕ ಕುಟುಂಬಗಳಿವೆ. ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ, ವಸತಿ ಪದವಿ ಪೂರ್ವ ಕಾಲೇಜು ಇದೇ ಪರಿಸರದಲ್ಲಿದ್ದು ಸುಮಾರು 400 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 100 ಮೀಟರ್ ದೂರದಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ವಸತಿ ಶಿಲ್ಪಕಲಾ ಕೇಂದ್ರವಿದೆ. ಇಲ್ಲಿ 150 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ ಅಂಗನವಾಡಿ, ಸರಕಾರಿ
ಶಾಲೆ, ಖಾಸಗಿ ಶಾಲೆ, ಪ್ರಾರ್ಥನಾ ಮಂದಿರಗಳು ಈ ಪ್ರದೇಶದಲ್ಲಿದೆ. ಕೈಗಾರಿಕೆ ಸ್ಥಾಪನೆಯಿಂದ ದಟ್ಟವಾದ ಹೊಗೆ ಹಾಗೂ ದುರ್ವಾಸನೆಯಿಂದ ಜನಜೀವನಕ್ಕೆ ತೊಂದರೆಯಾಗಿ ಜನರು ಮಾರಕ ರೋಗಗಳಿಗೆ ತುತ್ತಾಗುವ ಸಂಭವವಿರುತ್ತದೆ. ಹೀಗಾಗಿ ಕ್ಯಾಶ್ಯು ಶೆಲ್‌ ಮತ್ತು ಶೆಲ್‌ ಕೇಕ್‌ ಘಟಕ ಸ್ಥಾಪನೆಗೆ ನಮ್ಮ ವಿರೋಧವಿದೆ ಎಂದವರು ಹೇಳಿದರು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ತಹಶೀಲ್ದಾರರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮನವಿ ಸಲ್ಲಿಸಲಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಇಂತಹ ಕಾರ್ಖಾನೆ ಸ್ಥಾಪನೆಗೆ ಮುಂದಾದರೆ ಯಾವ ಬೆಲೆ ತೆತ್ತಾದರೂ ಇದನ್ನು ಆರಂಭಿಸಲು ಬಿಡಲಾರೆವು ಎಂದು ಪತ್ರಿಕಾಗೋಷ್ಠಿಯಲ್ಲಿ ಶೇಖ್‌ ಶಬ್ಬೀರ್‌ ಎಚ್ಚರಿಕೆ ನೀಡಿದರು. ಸಮಿತಿ ಗೌರವಾಧ್ಯಕ್ಷ ಮಂಜುನಾಥ ನಾಯಕ್, ಅಧ್ಯಕ್ಷ ಪ್ರಶಾಂತ ಪೂಜಾರಿ, ಜೊತೆ ಕಾರ್ಯದರ್ಶಿ ಗಣೇಶ್ ಕುಮಾರ್, ರಾಜೇಶ್ ದೇವಾಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest Posts

error: Content is protected !!