Wednesday, August 17, 2022
spot_img
Homeರಾಜ್ಯದಾವಣಗೆರೆಯಲ್ಲಿ ಅದ್ಧೂರಿ ಸಿದ್ದರಾಮೋತ್ಸವ

ದಾವಣಗೆರೆಯಲ್ಲಿ ಅದ್ಧೂರಿ ಸಿದ್ದರಾಮೋತ್ಸವ

ಕಾರ್ಕಳ : ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಲ್ಲ ಸಮುದಾಯಗಳು ಶಾಂತಿ, ಸಾಮರಸ್ಯದಿಂದ ಬದುಕುವ ವಾತಾವರಣವಿತ್ತು. ಆದರೆ, ಈಗಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯದ ಜನತೆ ಭಯದಿಂದ ಬದುಕುವಂತಾಗಿದೆ. ದೇಶದಲ್ಲಿ ಕಾಂಗ್ರೆಸ್ ಸಾಮರಸ್ಯ ಮೂಡಿಸಿದರೆ ಬಿಜೆಪಿ ಸರಕಾರ ರಾಜಕೀಯ ಕಾರಣಕ್ಕಾಗಿ ಜನರನ್ನು ವಿಭಜಿಸುತ್ತಿದ್ದು ಅಶಾಂತಿ ಸೃಷ್ಟಿಸಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು. ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವ ಅಂಗವಾಗಿ ಬುಧವಾರ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿಯಿಂದ ಬಸವಣ್ಣ ತತ್ವಕ್ಕೆ ವಿರುದ್ಧ ಆಡಳಿತ
ಯಾವುದೇ ಉದ್ಯಮ, ವ್ಯಾಪಾರ ಯಶಸ್ವಿಯಾಗಲು ಶಾಂತಿ ಬೇಕು. ಆದರೆ, ಈಗಿನ ಬಿಜೆಪಿ ಸರಕಾರಕ್ಕೆ ಜನರ ಜೀವನದ ಬಗ್ಗೆ ಬದ್ಧತೆ ಇಲ್ಲ. ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸಲಾಗುತ್ತಿದೆ. ನೋಟ್ ಅಮಾನ್ಯೀಕರಣ ಕೇಂದ್ರ ಸರ್ಕಾರದ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆಗಳು ಮುಚ್ಚುವಂತಾಯಿತು. ನೋಟ್ ಅಮಾನ್ಯೀಕರಣ, ಜಿಎಸ್ ಟಿ ಹೆಸರಿನಲ್ಲಿ ದೇಶಕ್ಕೆ ವಂಚನೆ ಮಾಡಲಾಗಿದೆ ಎಂದು ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಕ್ಷೀರಭಾಗ್ಯ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವರ ಆಡಳಿತ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಿತ್ತು. ಕರ್ನಾಟಕದ ಸಂಸ್ಕೃತಿ, ಉಳಿಸಿ, ಬೆಳೆಸಲು ಜನರ ಆಶೀರ್ವಾದ ಬಹಳ ಮುಖ್ಯವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ಬರುವಂತಾಗಬೇಕೆಂದರು.

ಬಿಜೆಪಿಯಿಂದ ದ್ವೇಷದ ರಾಜಕಾರಣ – ಸಿದ್ದರಾಮಯ್ಯ
ಹಿಂದೂ ರಾಷ್ಟ್ರ ನಿರ್ಮಾಣ ಬಿಜೆಪಿಯ ಗುರಿಯಾಗಿದೆ. ಬಿಜೆಪಿಯಿಂದ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಗಿಸುವ ನಿಮ್ಮ ಕನಸು ನನಸು ಆಗಲ್ಲ. ದೇಶದ ಸಂವಿಧಾನ ಬದಲಿಸಲು ಈ ದೇಶದ ಜನ ಬಿಡಲ್ಲ ಎಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಸಿದ್ದರಾಮಯ್ಯ ಗುಡುಗಿದರು.
2013ರಲ್ಲಿ ತಾನು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕಾರಣ. ಪ್ರಧಾನಿ ಹುದ್ದೆಯನ್ನೇ ನಿರಾಕರಿಸಿದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಅಕ್ರಮ ಲೇವಾದೇವಿ ನಡೆಯದಿದ್ದರೂ ಇಡಿಯಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸರಣಿ ಕೊಲೆಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇವಲ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಪರಿಹಾರದ ಚೆಕ್‌ ಹಸ್ತಾಂತರಿಸಿದ್ದಾರೆ. ಕೊಲೆಯಾದ ಮಸೂದ್, ಫಾಜಿಲ್ ಕುಟುಂಬಕ್ಕೆ ಸಿಎಂ ಏಕೆ ಪರಿಹಾರ ನೀಡಲಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬೊಮ್ಮಾಯಿ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿನಾ ? ನೀವು ಸಿಎಂ ಆಗಿ ಮುಂದುವರೆಯಲು ಯಾವ ನೈತಿಕತೆ ಇದೆ. ರಾಜ್ಯ ಆಳುವುದಕ್ಕೆ ನಾಲಾಯಕ್, ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಒತ್ತಾಯಿಸಿದರು.
ಜನರ ಬೆಂಬಲವಿಲ್ಲದೇ ಯಾರೊಬ್ಬರೂ ಕೂಡಾ ಧೀರ್ಘಕಾಲ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ನಾನು 44 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಶಾಸಕ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಈ ಅವಕಾಶ ಕಲ್ಪಿಸಿದ್ದಕ್ಕೆ ಇಡೀ ಕರ್ನಾಟಕಕ್ಕೆ ಧನ್ಯವಾದ ಸಲಿಸುತ್ತೇನೆ. ಎಲ್ಲಿಯವರೆಗೂ ಶಕ್ತಿಯಿರುತ್ತದೆಯೋ ಅಲ್ಲಿಯವರೆಗೂ ರಾಜಕೀಯ ಮಾಡುತ್ತೇನೆ ಎಂದರು.

ಸಿದ್ದರಾಮಯ್ಯ ಸರ್ವ ಜನಾಂಗದ ನಾಯಕ – ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್ ಮಾತನಾಡಿ. ಸಿದ್ದರಾಮಯ್ಯ ಕೇವಲ ಹಿಂದುಳಿದ ವರ್ಗಗಳ ನಾಯಕರಲ್ಲ, ಅವರು ಸರ್ವ ಜನಾಂಗ, ಧರ್ಮದ ನಾಯಕ. ಅವರ ಮುಂದಾಳತ್ವದಲ್ಲಿ ಕೆಲಸ ಮಾಡೋಣ, ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋಣ ಎಂದರು. ಈ ನಿಟ್ಟಿನಲ್ಲಿ ಒಗಟ್ಟಿನಿಂದ ದುಡಿಯೋಣ ಎಂದು ಕರೆ ನೀಡಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!