Homeಸ್ಥಳೀಯ ಸುದ್ದಿಕಾರ್ಕಳದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ತೆರೆಮರೆ ಪ್ರಯತ್ನ ಶುರು

Related Posts

ಕಾರ್ಕಳದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ತೆರೆಮರೆ ಪ್ರಯತ್ನ ಶುರು

ಕಾರ್ಕಳ : 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಕಳದಿಂದ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುರಿತು ರಾಜಕೀಯ ವಲಯದಲ್ಲಿ ಇದೀಗ ಭಾರಿ ಚರ್ಚೆಯಾಗುತ್ತಿದೆ. ಜೂ. 11ರಂದು ಕಾರ್ಕಳದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್‌ ಕಟ್ಟುವ ಕುರಿತು ಮಾತನಾಡಿದ್ದಾರೆ. ಈ ವೇಳೆ ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಮೊಯ್ಲಿ ಪಕ್ಷದ ಪ್ರಮುಖರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗುವುದು ಎಂದಷ್ಟೇ ಹೇಳಿದರು. ಹೀಗಾಗಿ ಅಭ್ಯರ್ಥಿ ಆಯ್ಕೆ ಬಗ್ಗೆಯಿನ್ನೂ ನಿರ್ಧಾರವಾಗಿಲ್ಲ ಎಂದೇ ಹೇಳಬಹುದು. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿತನಕ್ಕೆ ಅನೇಕರು ಆಕಾಂಕ್ಷಿಗಳಿದ್ದು, ಟಿಕೆಟ್‌ಗಾಗಿ ಈಗಾಗಲೇ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಲ್ಲಿ ಸಿಟ್ಟಿಂಗ್‌ ಎಂಎಲ್‌ಎ, ಸಚಿವ ಸುನೀಲ್‌ ಕುಮಾರ್‌ ಅವರೇ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿಯಲ್ಲಿ ಅಭ್ಯರ್ಥಿತನದ ಬಗ್ಗೆ ಯಾವುದೇ ಚರ್ಚೆಯಾಗುತ್ತಿಲ್ಲ.

ಸಂಭಾವ್ಯರಲ್ಲಿ ಮಂಜುನಾಥ ಪೂಜಾರಿ, ಸುರೇಂದ್ರ ಶೆಟ್ಟಿ, ಡಿ.ಆರ್.‌ ರಾಜು ಅವರ ಹೆಸರಿನೊಂದಿಗೆ ಇದೀಗ ಶೇಖರ್‌ ಮಡಿವಾಳ್‌ ಹೆಸರು ಕೂಡ ಕೇಳಿ ಬರುತ್ತಿದೆ. ನ್ಯಾಯವಾದಿಯಾಗಿರುವ ಶೇಖರ್‌ ಮಡಿವಾಳ್‌ ಅವರು ಕಳೆದ 4 ದಶಕಗಳಿಂದ ಕಾಂಗ್ರೆಸ್‌ನಲ್ಲಿ ಕಾರ್ಯನಿರ್ವಹಿಸಿದವರು. ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅ‍ಧ್ಯಕ್ಷರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ, ರಾಜ್ಯ ಕೃಷಿ ಮಾರಾಟ ಮಂಡಳಿ, ಭೂನ್ಯಾಯ ಮಂಡಳಿ ಸದಸ್ಯರಾಗಿ, ಕಾರ್ಕಳ ತಾಲೂಕು ಪಂಚಾಯತ್‌ ಉಪಾಧ್ಯಕ್ಷರಾಗಿ, ಹೆಬ್ರಿ ಮಂಡಲ ಪಂಚಾಯತ್‌ ಸದಸ್ಯರಾಗಿ, ಗುರುಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಅಪಾರ ರಾಜಕೀಯ ಅನುಭವ ಹೊಂದಿರುತ್ತಾರೆ. ಕಾನೂನು ಜೊತೆಗೆ ಉತ್ತಮ ವಾಗ್ಮಿಯೂ ಆಗಿರುವ ಶೇಖರ್‌ ಮಡಿವಾಳ್‌ ತಾನು ಅಭ್ಯರ್ಥಿತನಕ್ಕೆ ಆಕಾಂಕ್ಷಿ ಎಂದು ಜಿಲ್ಲಾ ಕಾಂಗ್ರೆಸ್‌ಗೆ ಮನವಿ ನೀಡಿರುತ್ತಾರೆ ಎಂದು ತಿಳಿದುಬಂದಿದೆ. ಇಂದಿರಾ ಗಾಂಧಿ ಅವಧಿಯಿಂದಲೇ ಗೋಪಾಲ ಭಂಡಾರಿ ಜೊತೆಯಾಗಿ ಪಕ್ಷಕ್ಕಾಗಿ ದುಡಿದವರು. ಗೋಪಾಲ ಭಂಡಾರಿ ಕಾಲನಂತರ ಹಿರಿಯ ಕಾಂಗ್ರೆಸ್ಸಿಗ ಶೇಖರ್‌ ಮಡಿವಾಳ್‌ ಅವರನ್ನೇ ನಾಯಕನನ್ನಾಗಿ ಬಿಂಬಿಸುವ ಇಚ್ಚೆಯನ್ನು ವೀರಪ್ಪ ಮೊಯ್ಲಿ ಹೊಂದಿದ್ದರು. ಅನೇಕ ಕಾರ್ಯಕರ್ತರೂ ಶೇಖರ್‌ ಮಡಿವಾಳ್‌ ಅವರು ಒಮ್ಮತದ ಅಭ್ಯರ್ಥಿಯೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಮಂಜುನಾಥ ಪೂಜಾರಿ
ಕಾಂಗ್ರೆಸ್‌ನ ನಿಷ್ಠಾವಂತ, ತಳಮಟ್ಟದ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ ಪೂಜಾರಿ ಅವರ ಹೆಸರೂ ಕಾಂಗ್ರೆಸ್‌ ಅಭ್ಯರ್ಥಿ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿದೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ ಮತ್ತು ಮಾಜಿ ಶಾಸಕ ಗೋಪಾಲ ಭಂಡಾರಿ ಅವರ ಗರಡಿಯಲ್ಲಿ ಪಳಗಿರುವ ಇವರು ಜಿ.ಪಂ. ತಾ.ಪಂ. ಸದಸ್ಯರಾಗಿ ಅನುಭವ ಹೊಂದಿದ್ದಾರೆ. ನಿರಂತರ ಹೋರಾಟದ ಮೂಲಕ, ಬಿಜೆಪಿಯನ್ನು ಕುಟುವಾಗಿ ಟೀಕಿಸುವ ಇವರು ಹಲವಾರು ಪ್ರತಿಭಟನೆ ನೇತೃತ್ವ ವಹಿಸಿರುತ್ತಾರೆ. ಮುದ್ರಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಂಜುನಾಥ ಪೂಜಾರಿ ಅವರ ಹೆಸರು ಕೂಡ ಅಭ್ಯರ್ಥಿತನಕ್ಕೆ ಕೇಳಿ ಬರುತ್ತಿರುವ ಮತ್ತೊಂದು ಹೆಸರು.

ಸುರೇಂದ್ರ ಶೆಟ್ಟಿ
ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶಿವತಿಕೆರೆ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ ಅವರು ಇತ್ತೀಚೆಗೆ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ಎನ್‌ಎಸ್‌ಯುಐ ಮೂಲಕ ಗುರುತಿಸಿಕೊಂಡಿದ್ದ ಇವರು 1990ರ ದಶಕದಲ್ಲಿ ಕಾರ್ಕಳ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕುಂದಾಪುರದಲ್ಲಿ ಸಹನಾ ಗ್ರೂಫ್‌ ಆಫ್‌ ಕಂಪನಿ ನಡೆಸುತ್ತಿರುವ ಸುರೇಂದ್ರ ಶೆಟ್ಟಿ ಅವರು ಡಿ.ಕೆ. ಸಹೋದರರ ಒಡನಾಟ ಹೊಂದಿರುವುದು ಅವರಿಗೆ ವರವಾಗಲಿದೆ ಎಂದೂ ಹೇಳಲಾಗುತ್ತಿದೆ. ಬಂಟ ಸಮುದಾಯದವರಿಗೆ ಟಿಕೆಟ್‌ ನೀಡುವುದಾದರೆ ಸುರೇಂದ್ರ ಶೆಟ್ಟಿ ಅವರಿಗೆ ನೀಡಬೇಕೆಂಬ ಒತ್ತಾಯವೂ ಇದೆ.

ಡಿ.ಆರ್.‌ ರಾಜು
ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅ‍ಧ್ಯಕ್ಷ, ಉದ್ಯಮಿ ಡಿ.ಆರ್.‌ ರಾಜು ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಿದಲ್ಲಿ ಸ್ಪರ್ಧಿಸುವ ಇಚ್ಚೆ ಹೊಂದಿದ್ದಾರೆ. ರಾಜಕೀಯದ ಕುರಿತು‌ ಅಪಾರ ಅನುಭವ ಹೊಂದಿರುವ ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಆಪ್ತರಾಗಿದ್ದ ಡಿ.ಆರ್.‌ ರಾಜು ಅವರು ಈ ಹಿಂದೆ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇವರು ಕಳೆದ 5 ವರ್ಷಗಳಿಂದ ರಶ್ಮಿ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ವಿದ್ಯಾರ್ಥಿ ವೇತನ ಸೇರಿದಂತೆ ಹತ್ತಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿರುವ ಡಿ.ಆರ್.‌ ರಾಜು ಅವರು ಅಭ್ಯರ್ಥಿಯಾಗುವುದಾದರೆ ಕಾಂಗ್ರೆಸ್‌ನ ಯಾರ ವಿರೋಧವೂ ಇಲ್ಲ ಎನ್ನಲಾಗುತ್ತಿದೆ.

ಹಿರಿಯ ಕಾಂಗ್ರೆಸ್ಸಿಗರು, ಪುರಸಭಾ ಮಾಜಿ ಸದಸ್ಯರಾಗಿರುವ ಕೃಷ್ಣಮೂರ್ತಿ, ಡಿಸಿಸಿ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅವರೂ ಪಕ್ಷ ಟಿಕೆಟ್‌ ನೀಡಿದಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಕೃಷ್ಣಮೂರ್ತಿ ಅವರು ಕಾರ್ಕಳ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ, ಬ್ಲಾಕ್‌ ಕಾಂಗ್ರೆಸ್‌ ಹಾಗೂ ಡಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಅವರು ತಟಸ್ಥರಾಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಹರ್ಷ ಮೊಯ್ಲಿ ಕಾರ್ಕಳದಿಂದ ಅಭ್ಯರ್ಥಿಯಾಗಲ್ಲ ಎಂದು ನ್ಯೂಸ್‌ ಕಾರ್ಕಳಕ್ಕೆ ಸ್ಪಷ್ಟಪಡಿಸಿದ್ದಾರೆ.

ಆಮ್‌ ಆದ್ಮಿ ಪಕ್ಷ
ಕಾರ್ಕಳದಲ್ಲಿ ಇದೀಗ ಆಮ್‌ ಆದ್ಮಿ ಪಕ್ಷ ಬೇರೂರಲು ಪ್ರಯತ್ನಿಸುತ್ತಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಡೇನಿಯಲ್‌ ರೇಂಜರ್ ಅವರು ಆಮ್‌ ಆದ್ಮಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಕಣಕ್ಕಿಳಿಯಲಿದೆ. ಶೀಘ್ರವೇ ನಮ್ಮ ಪಕ್ಷದ ಅಭ್ಯರ್ಥಿ ಹೆಸರು ಪ್ರಕಟಿಸಲಾಗುವುದು ಎಂದರು.

ಆರ್ಥಿಕವಾಗಿ ಬಲಾಢ್ಯರಾಗಿರುವ, ಜಾತಿ ಬಲ ಹೊಂದಿರುವವರೇ ಕಾರ್ಕಳದಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವಂತಿಲ್ಲ. ಸಮುದಾಯದ ಮತದಾರರು ಕಡಿಮೆಯಿದ್ದ ಡಾ. ವೀರಪ್ಪ ಮೊಯ್ಲಿ ಅವರು 1972ರಿಂದ 1994ರವರೆಗೆ ಕಾರ್ಕಳ ಶಾಸಕರಾಗಿದ್ದರು. 1999 ಮತ್ತು 2008ರ ಎರಡು ಅವಧಿಗೆ ಹೆಚ್. ಗೋಪಾಲ ಭಂಡಾರಿ‌ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಹೊರಗಡೆಯಿಂದ ಬಂದು ಕಾರ್ಕಳದಲ್ಲಿ ಅಭ್ಯರ್ಥಿಯಾಗುವ ಸಾಧ್ಯತೆ ತೀರಾ ಕಡಿಮೆ. ಅಂತಿಮವಾಗಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾರ್ಕಳಕ್ಕೆ ಹೈಕಮಾಂಡ್‌ನಂತಿರುವ ಮೊಯ್ಲಿ ಅವರ ನಿರ್ಧಾರವೇ ಅಂತಿಮವಾಗಲಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!