ಡ್ರೋನ್ ದಾಳಿಯಲ್ಲಿ ಜಗತ್ತಿಗೆ ಕಂಟಕನಾಗಿದ್ದ ಉಗ್ರನನ್ನು ಹೊಡೆದುರುಳಿಸಿದ ಅಮೆರಿಕ
ವಾಷಿಂಗ್ಟನ್: ಆಲ್ ಕಾಯಿದ ಉಗ್ರ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಅಯ್ಮನ್ ಅಲ್ ಜವಾಹಿರಿಯನ್ನು ಅಮೆರಿಕ ಡ್ರೋನ್ ದಾಳಿಯ ಮೂಲಕ ಹತ್ಯೆ ಮಾಡಿದೆ. ಎರಡು ದಿನಗಳ ಹಿಂದೆಯೇ ಅಮೆರಿಕ ನಡೆಸಿದ ಡ್ರೋನ್ ಕಾರ್ಯಾಚರಣೆಯಲ್ಲಿ ಜವಾಹಿರಿ ಹತನಾಗಿದ್ದಾನೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಈ ವಿಚಾರವನ್ನು ನಿನ್ನೆ ಹೊರ ಜಗತ್ತಿಗೆ ಘೋಷಿಸಿದ್ದಾರೆ. ಜವಾಹಿರಿ ಹತ್ಯೆ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಜಗತ್ತಿಗೆ ಸಿಕ್ಕರುವ ಅತಿ ದೊಡ್ಡ ಗೆಲುವು ಎನ್ನಲಾಗಿದೆ.
ಬಾಲ್ಕನಿಯಲ್ಲಿ ಹತ್ಯೆ
ಆಫಘಾನಿಸ್ಥಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ರಾಜಧಾನಿ ಕಾಬೂಲ್ನಲ್ಲಿಯೇ ಠೀಕಾಣಿ ಹೂಡಿದ್ದ ಜವಾಹಿರಿಯ ಮೇಲೆ ಅಮೆರಿಕದ ಗುಪ್ತಚರ ಪಡೆ ಸಿಐಎ ಬಹಳ ಸಮಯದಿಂದ ಕಣ್ಣಿಟ್ಟಿತ್ತು. ಭಾನುವಾರ ಮುಂಜಾನೆ ಜವಾಹಿರಿ ಮನೆಯ ಬಾಲ್ಕನಿಗೆ ಬಂದ ವೇಳೆ ಡ್ರೋನ್ ಮೂಲಕ ಎರಡು ಹೆಲ್ಫಯರ್ ಮಿಸೈಲ್ಗಳನ್ನು ಸಿಡಿಸುವ ಮೂಲಕ ಮುಗಿಸಲಾಗಿದೆ. ಆತ ನಿತ್ಯ ಮುಂಜಾನೆ ಬಾಲ್ಕನಿಗೆ ಬಂದು ತುಸು ಹೊತ್ತು ಗಾಳಿ ಸೇವನೆ ಮಾಡುತ್ತಿರುವುದನ್ನು ಗಮನಿಸಲಾಗಿತ್ತು.
ತಾಲಿಬಾನ್ ಆಳ್ವಿಕೆ ಶುರುವಾದ ಬೆನ್ನಿಗೆ ಜವಾಹಿರಿ ಗುಹೆಗಳನ್ನು ಬಿಟ್ಟು ಕಾಬೂಲ್ಗೆ ವಾಸ್ತವ್ಯ ಬದಲಾಯಿಸಿದ ಕುರಿತು ಅಮೆರಿಕಕ್ಕೆ ಮಾಹಿತಿ ಸಿಕ್ಕಿತ್ತು.
ಜಗತ್ತಿಗೆ ಕಂಟಕನಾಗಿದ್ದ ಉಗ್ರ

ಒಸಾಮ ಬಿನ್ ಲಾದೆನ್ನನ್ನು ಅಮೆರಿಕ ಬೇಟೆಯಾಡಿದ ಬಳಿಕ ಜವಾಹಿರಿ ಅಲ್ ಕಾಯಿದ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದ. ಒಸಾಮನ ಹತ್ಯೆ ಬಳಿಕ ದುರ್ಬಲಗೊಂಡಿದ್ದ ಅಲ್ ಕಾಯಿದಾವನ್ನು ಮತ್ತೆ ಗಟ್ಟಿಗೊಳಿಸಲು ಅವನು ಪ್ರಯತ್ನಿಸುತ್ತಿದ್ದ. ಭಾರತವೂ ಸೇರಿದಂತೆ ಏಷ್ಯಾ ಖಂಡದ ಕೆಲವು ದೇಶಗಳ ಮೇಲೆ ಅವನ ಕಣ್ಣಿತ್ತು.
ಈಜಿಪ್ಟ್ ಮೂಲದ ಜವಾಹಿರಿ ಕೈರೊ ಉಪನಗರದಲ್ಲಿ ಸಿರಿವಂತ ಕುಟುಂಬದಲ್ಲಿ ಜನಿಸಿದವ. ಕಣ್ಣಿನ ವೈದ್ಯನಾಗಿದ್ದ ಜವಾಹಿರಿ ಬಾಲ್ಯದಲ್ಲಿಯೇ ಸುನ್ನಿ ಪಂಥದ ಉಗ್ರವಾದದೆಡೆ ಆಕರ್ಷಿತನಾಗಿದ್ದ. ಇಡೀ ಪ್ರಪಂಚದಲ್ಲಿ ಸುನ್ನಿ ಕಟ್ಟರ್ ಆಡಳಿತವನ್ನು ಜಾರಿಗೆ ತರುವ ಸಲುವಾಗಿ ಅವನು ಒಸಾಮನ ಜೊತೆಗೆ ಕೈಜೋಡಿಸಿದ್ದ.
ಭಾರತವೂ ನಿರಾಳ
ಜವಾಹಿರಿ ಹತ್ಯೆಯಿಂದ ಭಾರತವೂ ತುಸು ನಿರಾಳವಾಗಿದ್ದ. ಭಾರತದಲ್ಲಿ ಅಲ್ ಕಾಯಿದ ಜಾಲ ಹರಡಲು ಜವಾಹಿರಿ ಬಹಳ ಮುತುವರ್ಜಿ ವಹಿಸಿದ್ದ. ಅದಕ್ಕಾಗಿಯೇ ಭಾರತ ಉಪಖಂಡದ ವಿಭಾಗವನ್ನೂ ಪ್ರಾರಂಭಿಸಿದ್ದ. ಅಲ್ ಕಾಯಿದದ ಹಲವು ಉಗ್ರರನ್ನು ಭಾರತದಲ್ಲಿ ಸೆರೆ ಹಿಡಿಯಲಾಗಿತ್ತು. ಅವರು ಸ್ಲೀಪರ್ ಸೆಲ್ ರೀತಿ ಅಲ್ ಕಾಯಿದಕ್ಕಾಗಿ ಕೆಲಸ ಮಾಡುತ್ತಿದ್ದರು.