ಎರಡು ದಿನ ಭಕ್ತರ ಪ್ರವೇಶ ನಿಷೇಧ : ಜಿಲ್ಲಾಡಳಿತ
ದ.ಕ. : ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಆಸುಪಾಸಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇವಲ ಮೂರು ಗಂಟೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ 265 ಮಿಮೀ ಗಿಂತಲೂ ಅಧಿಕ ಮಳೆಯಾಗಿದ್ದು, ಸಮೀಪದ ಕಲ್ಲಾಜೆಯಲ್ಲಿ 400 ಮಿಮೀ ಮಳೆಯಾಗಿದೆ. ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದು, ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು ಮನೆ ಮಂದಿ ಮಣ್ಣಿನಡಿ ಮಕ್ಕಳು ಸಹಿತ ಸಿಲುಕಿದ್ದಾರೆ. ಮನೆಯಲ್ಲಿ ಇಬ್ಬರು ಮಕ್ಕಳು ಓರ್ವ ವೃದ್ಧೆ ಸಹಿತ ನಾಲ್ಕು ಮಂದಿ ವಾಸಿಸುತ್ತಿದ್ದರು. ಅವರೆಲ್ಲರೂ ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಮಣ್ಣಿನಡಿ ಸಿಲುಕಿರುವವರನ್ನು ಹೊರತೆಗೆಯಲು ಸಾಹಸ ಪಡಲಾಗುತ್ತಿದೆ. ಸ್ಥಳೀಯರು ನಿರಂತರ ಪ್ರಯತ್ನದಲ್ಲಿದ್ದಾರೆ. ಭಾರೀ ಮಳೆಗೆ ರಸ್ತೆ ಬ್ಲಾಕ್ ಆಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಧಾವಿಸಲು ಅಡ್ಡಿಯಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಭಕ್ತರು ಸುಬ್ರಹ್ಮಣ್ಯಕ್ಕೆ ತೆರಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಆದಿಸುಬ್ರಹ್ಮಣ್ಯ ಭಾರಿ ಮಳೆಯಿಂದಾಗಿ ಮುಳುಗಡೆಯಾಗಿದೆ. ನಾಗರಪಂಚಮಿಯ ಮುನ್ನಾದಿನವೆ ಸುಬ್ರಹ್ಮಣ್ಯನಿಗೆ ಜಲಕಂಟಕ ಎದುರಾಗಿದೆ. ಪ್ರವಾಹದ ಸುಳಿಯಲ್ಲಿ ಸುಬ್ರಹ್ಮಣ್ಯ ಇರುವಿದರಿಂದ ಮುಂಜಾಗ್ರತ ಕ್ರಮವಾಗಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.