ಕಾರ್ಕಳ : ಸಂಘಟನೆ ಕಟ್ಟುವುದಕ್ಕಿಂತ ಅದನ್ನು ಸಕ್ರಿಯವಾಗಿ ಮುಂದುವರಿಸಿಕೊಂಡು ಹೋಗುವುದು ಮುಖ್ಯ. ಸಂಘಗಳಿಗೆ ಸಂಘಟನೆಯೇ ಶಕ್ತಿ ಎಂದು ಪತ್ರಕರ್ತ ಮನೋಹರ್ ಪ್ರಸಾದ್ ಹೇಳಿದರು.
ಅವರು ಜು. 31ರಂದು ಅನಂತಶಯನ ಶ್ರೀ ವಿಶ್ವೇಶ್ವರ ವೇಣುಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಶಂಕರ ಪ್ರತಿಷ್ಠಾನ ಸಂಘದ ಮಹಾಸಭೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಲ್ಲರೂ ಒಟ್ಟಾಗಿ ತೊಡಗಿಸಿಕೊಂಡಲ್ಲಿ ಸಂಘ ಚೆನ್ನಾಗಿ ಮುಂದುವರಿಯುವುದು. ಈ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡಬಹುದಾಗಿದೆ ಎಂದು ಮನೋಹರ್ ಪ್ರಸಾದ್ ಅಭಿಪ್ರಾಯಪಟ್ಟರು.
ಭಜನಾ ಮಂಡಳಿ ಉದ್ಘಾಟನೆ
ಯರ್ಲಪಾಡಿ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಅನಂತಪಟ್ಟಾಭಿ ರಾವ್ ಅವರು ನೂತನವಾಗಿ ಅಸ್ವಿತ್ವಕ್ಕೆ ಬಂದಿರುವ ಶ್ರೀ ಶಂಕರ ಭಜನಾ ಮಂಡಳಿಯನ್ನು ಉದ್ಘಾಟಿಸಿದರು. ಶ್ರೀ ಶಂಕರ ಪ್ರತಿಷ್ಠಾನದ ಅಧ್ಯಕ್ಷ ಕೇಶವ ರಾವ್ ಕುಕ್ಕುಂದೂರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಸುಮಂಗಳ ಎಸ್. ರಾವ್, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್, ಸಂಘದ ಕಾರ್ಯದರ್ಶಿ ಹರೀಶ್ವಂದ್ರ ರಾವ್, ಯುವ ವಿಭಾಗದ ಅಧ್ಯಕ್ಷ ವಿಘ್ನೇಶ್ ರಾವ್, ಕೋದಂಡರಾಮ ರಾವ್, ರಾಜಶೇಖರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹ ಧನ ನೀಡಲಾಯಿತು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿವಹಿಸುತ್ತಿರುವ ಮನೋಹರ ರಾವ್, ಸಾವಿತ್ರಿ ಮನೋಹರ್ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಹಿಳಾ ವಿಭಾಗದ ಅಧ್ಯಕ್ಷೆ ವಿ. ವಿದ್ಯಾವತಿ ರಾವ್ ಸ್ವಾಗತಿಸಿ, ಸತೀಶ್ ರಾವ್ ಕರ್ವಾಲು, ಲಕ್ಷ್ಮೀ ಕೋದಂಡ ರಾವ್ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾ ಎಸ್. ಹೆಬ್ಬಾರ್ ವಂದಿಸಿದರು.