ಟ್ರಿನಿಡಾಡ್ : ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಸೂರ್ಯಕುಮಾರ್ ಯಾದವ್ ಇನಿಂಗ್ಸ್ ಆರಂಭಿಸಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ನಿರ್ಧಾರ ತೆಗೊಂಡ ಕೋಚ್ ರಾಹುಲ್ ದ್ರಾವಿಡ್ ಹಾಗೂ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಕೈಪ್ ಟೀಕಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಕಳೆದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ರಿಷಭ್ ಪಂತ್ಗೆ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿ ನೂತನ ಪ್ರಯೋಗಕ್ಕೆ ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿತ್ತು. ರಿಷಭ್ ಪಂತ್ ಅವರನ್ನು ಈ ಸರಣಿಯಲ್ಲಿಯೂ ಆರಂಭಿಕನನ್ನಾಗಿ ಆಡಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಶುಕ್ರವಾರ ನಡೆದಿದ್ದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಪಂತ್ ಬದಲು ಸೂರ್ಯ ಇನಿಂಗ್ಸ್ ಆರಂಭಿಸಿರುವುದು ಅಚ್ಚರಿಯ ಸಂಗತಿ. ಕೋಚ್, ತಂಡದ ನಾಯಕನ ತಂತ್ರ ಏನೆಂಬುದೇ ಅರ್ಥವಾಗುತ್ತಿಲ್ಲ ಎಂದು ಅವರ ನಿರ್ಧಾರವನ್ನು ಕೈಪ್ ಪ್ರಶ್ನಿಸಿದರು.