ಬೆಂಗಳೂರಿನಲ್ಲಿ ನಡೆದ ಘಟನೆ
ಬೆಂಗಳೂರು: ಬೆಂಗಳೂರಿನ 18 ವರ್ಷದ ಯುವತಿಯೊಬ್ಬಳು ತನ್ನ ಮೇಲೆ 12 ವರ್ಷಗಳ ಹಿಂದೆ ಚರ್ಚ್ನಲ್ಲಿ ಅತ್ಯಾಚಾರವಾಗಿತ್ತು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ದೂರಿನ ಮೇರೆಗೆ ಪೊಲೀಸರು ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರ ಬಡಾವಣೆಯ ದೊಡ್ಡಬೆಟ್ಟಹಳ್ಳಿ ಬಳಿಯ ಕಾವೇರಿ ಲೇಔಟ್ನ ಚರ್ಚ್ನಲ್ಲಿ 2010ರಲ್ಲಿ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಗೆ 6 ವರ್ಷ ವಯಸ್ಸಾಗಿದ್ದಾಗ, ಪೋಷಕರು ಚರ್ಚ್ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು ಮತ್ತು ಕೆಲಸದಿಂದ ಹಿಂದಿರುಗಿದ ನಂತರ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು.
ಬಾಲಕಿ ಚರ್ಚ್ನಲ್ಲಿದ್ದ ವೇಳೆಯಲ್ಲಿ ಆರೋಪಿ ಸೈಮನ್ ಪೀಟರ್ ಆಕೆಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಅತ್ಯಾಚಾರ ಎಸಗಿದ್ದಾನೆ. 14 ವರ್ಷದವರೆಗೂ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.
ಲೈಂಗಿಕ ದೌರ್ಜನ್ಯವನ್ನು ಸಹಿಸದ ಸಂತ್ರಸ್ತೆ, ಚರ್ಚ್ನಲ್ಲಿ ವಾಸವಾಗಿರುವ ಸಾಮ್ಯುಯೆಲ್ ಡಿಸೋಜಾ ಎಂಬವನಿಗೆ ಈ ವಿಷಯ ತಿಳಿಸಿದ್ದಳು. ಅವನು ಆರೋಪಿಗೆ ಛೀಮಾರಿ ಹಾಕಿದ್ದ ಮತ್ತು ಸಂತ್ರಸ್ತೆಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದ. ಆದರೆ ನಂತರ ಸಾಮ್ಯುಯೆಲ್ ಡಿಸೋಜಾನೆ ಬಾಲಕಿಗೆ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದನು. ಬಾಲಕಿ ಮೇಲೆ ಸೈಮನ್ ಪೀಟರ್ ಅತ್ಯಾಚಾರ ಎಸಗಿರುವ ವಿಚಾರವನ್ನು ಎಲ್ಲೆಡೆ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಚರ್ಚ್ನಲ್ಲಿ ಆತನ ಪತ್ನಿ ಸೇರಿದಂತೆ ಯಾರಿಗೂ ಯಾವುದೇ ಅನುಮಾನ ಬಾರದಂತೆ 2 ವರ್ಷಗಳ ಕಾಲ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ನಿರಂತರ ಲೈಂಗಿಕ ಕಿರುಕುಳದಿಂದ ಖಿನ್ನತೆಗೆ ಒಳಗಾಗಿದ್ದ ಬಾಲಕಿ ಕೌನ್ಸೆಲಿಂಗ್ ಮತ್ತು ಚಿಕಿತ್ಸೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರದ ಘಟನೆಯ ಬಗ್ಗೆ ತಿಳಿದ ನಂತರವೂ ಆರು ಆರೋಪಿಗಳು ವಿಷಯವನ್ನು ಮರೆಮಾಚಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು 8 ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಸಾಮೂಹಿಕ ಅತ್ಯಾಚಾರ ಮತ್ತು ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.