Friday, August 19, 2022
spot_img
Homeಸುದ್ದಿಪ್ರವೀಣ್‌ ಹತ್ಯೆ ಹಿನ್ನೆಲೆ: ಜನೋತ್ಸವ ರದ್ದು

ಪ್ರವೀಣ್‌ ಹತ್ಯೆ ಹಿನ್ನೆಲೆ: ಜನೋತ್ಸವ ರದ್ದು

ಬೆಂಗಳೂರು: ಸುಳ್ಯದ ಬೆಳ್ಳಾರೆಯ ಹಿಂದು ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರ ಬರ್ಬರ ಹತ್ಯೆ ಸರ್ಕಾರದ ಜನೋತ್ಸವ ಕಾರ್ಯಕ್ರಮದ ಮೇಲೆ ನೇರ ಪರಿಣಾಮ ಬೀರಿದೆ. ರಾಜ್ಯದಲ್ಲಿ ನಿರಂತರವಾಗಿ ಮತಾಂಧ ಶಕ್ತಿಗಳಿಂದ ಹಿಂದುಗಳ ಹತ್ಯೆಯಾಗುತ್ತಿದ್ದರೂ ಸರಕಾರ ಕಠಿಣ ಕ್ರಮ ಕೈಗೊಳ್ಳದಿರುವುದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಸರಕಾರ ಜನೋತ್ಸವ ಕಾರ್ಯಕ್ರಮವನ್ನೇ ರದ್ದುಗೊಳಿಸಿದೆ.
ನಿನ್ನೆ ಮಧ್ಯರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಜನೋತ್ಸವ ಕಾರ್ಯಕ್ರಮವನ್ನು ರದ್ದುಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಪ್ರವೀಣ್‌ ಹತ್ಯೆಯಿಂದ ಬಿಜೆಪಿ ಮತ್ತು ಹಿಂದು ಕಾರ್ಯಕರ್ತರಲ್ಲಿ ಆಕ್ರೋಶ ಮಡುಗಟ್ಟಿರುವ ಸಂದರ್ಭದಲ್ಲಿ ಸರಕಾರ ವಾರ್ಷಿಕೋತ್ಸವ ಆಚರಿಸಿದರೆ ತಪ್ಪು ಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕೆ ಜನೋತ್ಸವವನ್ನು ರದ್ದುಪಡಿಸಲಾಗಿದೆ.

ತುರ್ತು ಪತ್ರಿಕಾ ಗೋಷ್ಠಿಯಲ್ಲಿ ಸಿಎಂ ಬೊಮ್ಮಾಯಿ ಮಧ್ಯರಾತ್ರಿ ಕಾರ್ಯಕ್ರಮ ರದ್ದಾಗಿರುವುದನ್ನು ತಿಳಿಸಿದ್ದಾರೆ. “ಮನಃಸಾಕ್ಷಿ ಒಪ್ಪಿರಲಿಲ್ಲ. ತುಂಬಾ ತೊಳಲಾಟದಲ್ಲಿದ್ದೆ. ಹಾಗಾಗಿ ಕಾರ್ಯಕ್ರಮ ರದ್ದುಪಡಿಸಲು ನಿರ್ಧರಿಸಿದೆ” ಎಂದಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಇಂದು (ಜುಲೈ 28) ಸಾಧನಾ ಸಮಾವೇಶ ‘ಜನೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಕಲ ಏರ್ಪಾಡುಗಳು ಆಗಿದ್ದವು.
ಪ್ರವೀಣ್‌ ಹತ್ಯೆಗೆ ವ್ಯಕ್ತವಾಗಿರುವ ನಮ್ಮ ಪಕ್ಷದ ಯುವಕರ ಆಕ್ರೋಶವನ್ನೂ ಗಮನಿಸಿದೆ. ನನ್ನ ಮನಸ್ಸಿಗೂ ತುಂಬಾ ನೋವಾಗಿದೆ. ಹತ್ಯೆಯಾದ ಪ್ರವೀಣ್‌ ಅವರ ತಾಯಿಯ ಆಕ್ರಂದನ ನೋಡಿದ ಬಳಿಕ ಕಾರ್ಯಕ್ರಮ ರದ್ದುಪಡಿಸಲು ತೀರ್ಮಾನಿಸಿದೆ. ಜನೋತ್ಸವ ಮಾಡಲು ನನ್ನ ಮನಸಾಕ್ಷಿ ಒಪ್ಪಲಿಲ್ಲ. ಪತ್ರಿಕಾಗೋಷ್ಠಿಗೆ ಬರುವ ಮುನ್ನ ನಮ್ಮ ಪಕ್ಷದ ಅಧ್ಯಕ್ಷರಾದ ಜೆ.ಪಿ. ನಡ್ಡಾ ಸೇರಿದಂತೆ ಪ್ರಮುಖರಿಗೆ ಈ ಮಾಹಿತಿಯನ್ನು ನೀಡಲಾಗಿದೆ ಎಂದರು.
ಜನೋತ್ಸವ ನಡೆಸುವ ಮೂಲಕ ನಮ್ಮ ಸರಕಾರ ಜನಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು, ಮುಂದಿನ ಯೋಜನೆಗಳನ್ನು ಘೋಷಿಸಬೇಕು ಎಂದು ನಿಶ್ಚಯಿಸಿದ್ದೆವು. ನಮ್ಮ ಪಕ್ಷದ ಅಮಾಯಕ ಹಾಗೂ ನಿಷ್ಠಾವಂತ ಕಾರ್ಯಕರ್ತ ಪ್ರವೀಣರ ಹತ್ಯೆಯ ನೋವು ಹಾಗೂ ಯುವ ಸಮುದಾಯದ ಭಾವನೆಯನ್ನು ಗಮನಿಸಿದೆ. ಹಾಗಂತ, ಯುವಕರು, ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ದೊಡ್ಡಬಳ್ಳಾಪುರ ಹಾಗೂ ವಿಧಾನಸೌಧದಲ್ಲಿ ಇಂದು ನಡೆಯುವ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಆದರೆ, ಜನಪರ ಕಾರ್ಯಕ್ರಮ-ಯೋಜನೆಗಳನ್ನು ಮಾಧ್ಯಮದವರ ಮೂಲಕ ಪ್ರಕಟಿಸುತ್ತೇವೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!