ಕಾರ್ಕಳ : ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಕಾರ್ಕಳ ತಾಲೂಕು ನಿಟ್ಟೆಯ ಸುದೀಪ್ ಶೆಟ್ಟಿ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಉಡುಪಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ತೆರಳಿ ಐವರು ರಾಜೀನಾಮೆ ಸಲ್ಲಿಸಿದ್ದು, ಸಾಮಾಜಿಕ ಜಾಲತಾಣ ಸಹಸಂಚಾಲಕ ಹೆಬ್ರಿಯ ಸುನೀಲ್ ಪೂಜಾರಿ, ಕಾರ್ಕಳದ ಸಮೀರ್ ಹೆಗ್ಡೆ, ಸದಸ್ಯರಾದ ದೀಪಕ್ ಎರ್ಮಾಳ್, ನರಸಿಂಹ ಗಾಂವ್ಕರ್ ನೀಡಿದ್ದಾರೆ. ಸುಳ್ಯ, ಪುತ್ತೂರು, ಕೋಟ, ಕುಂದಾಪುರ, ಬೈಂದೂರು ಮತ್ತು ಮಲ್ಪೆ ಬೈಲಕೆರೆ ಹೀಗೆ ಹಲವಾರು ಕಡೆಗಳಲ್ಲಿ ಈಗಾಗಲೇ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
22 ಅಧಿಕ ಹಿಂದೂ ಕಾರ್ಯಕರ್ತರ ಕೊಲೆ
ಈ ಹಿಂದೆ ಹಿಂದೂ ಕಾರ್ಯಕರ್ತರಾಗಿದ್ದ ಪರೇಶ್ ಮೆಹ್ತಾ, ಶರತ್ ಮಡಿವಾಳ್, ದೀಪಕ್ ರಾವ್ ಸಹಿತ 22ಕ್ಕೂ ಅಧಿಕ ಹಿಂದೂಗಳ ಹತ್ಯೆಯನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಟುವಾಗಿ ಖಂಡಿಸಿ, ಹಿಂದುತ್ವದ ಹೆಸರಲ್ಲಿ ಅಧಿಕಾರ ಪಡೆದು ಹಿಂದೂಗಳ ರಕ್ಷಣೆಗೆ ಕಟಿಬದ್ಧರಾಗಿ ನಿಲ್ಲುತ್ತೇವೆ ಎಂದು ಹೇಳಿದ ಬಿಜೆಪಿ ಇದೀಗ ಕೊಲೆಗಡುಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ನಮ್ಮ ದುರ್ದೈವ. ಸರಕಾರದ ಪರವಾಗಿ ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಡೆ, ನಿಲುವನ್ನು ತಿಳಿಸಲು ಸಾಧ್ಯವಾಗದೇ ಇರುವುದರಿಂದ ಜಿಲ್ಲಾ ಸಾಮಾಜಿಕ ಜಾಲತಾಣ ತಂಡದ ಸದಸ್ಯರು ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಉಡುಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಸಂತೋಷ್ ಕುಮಾರ್ ಬೊಳ್ಜೆ ಸೇರಿದಂತೆ ಬೈಲಕೆರೆ ತೆಂಕನಿಡಿಯೂರು ಬಿಜೆಪಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ವಿಜಯಪ್ರಕಾಶ್ ಬೈಲಕೆರೆ, ಮಾಜಿ ತಾ.ಪಂ. ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ತೆಂಕನಿಡಿಯೂರು ಗ್ರಾ. ಪಂ. ಉಪಾಧ್ಯಕ್ಷ ಅರುಣ್ ಜತ್ತನ್ನ, ಸದಸ್ಯರಾದ ಸತೀಶ್ ಪೂಜಾರಿ, ವಿಕಿತಾ ಸುರೇಶ್, ಮಂಜುನಾಥ, ಪ್ರಶಾಂತ ಮತ್ತು ಉಡುಪಿ ಫಲಾನುಭವಿಗಳ ಪ್ರಕೋಷ್ಠ ಹಾಗೂ ಮಲ್ಪೆ ಬೈಕೆರೆಯಲ್ಲಿ ಐವತ್ತು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಕೋಟಾ ಯುವಮೋರ್ಚಾ ಸೇರಿದಂತೆ ಬೈಂದೂರು ಮಹಾಮಂಡಲದಲ್ಲಿ ಎಂಟು ಮಂದಿ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.