“ಕಳವಳವ ನೀಗಿಬಿಡು,ತಳಮಳವ ದೂರವಿಡು|
ಕಳೆ ತಳ್ಳು , ಗಲಭೆ ಗಾಬರಿಯ ಮನದಿಂದ||
ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು|
ತಿಳಿತಳಿವು ಶಾಂತಿಯಲಿ||”.
ಜೀವನದಲ್ಲಿ ಶಾಂತಿಯನ್ನು ಪಡೆಯಬೇಕಾದರೆ ಮನಸ್ಸಿನ ಚಿಂತೆಯನ್ನು ಬಿಡಬೇಕು. ತಳಮಳವನ್ನು ದೂರವಿಡಬೇಕು.ಕೊಳೆಯನ್ನು ತೊಳೆಯಬೇಕು.ಗದ್ದಲ ಮತ್ತು ಆತಂಕವನ್ನು ಮನದಿಂದ ದೂರ ತಳ್ಳಬೇಕು.ಅಲೆದಾಡುವ ದೀಪದ ಬೆಳಕಿನಲ್ಲಿ ಗುರಿಯತ್ತ ಕಣ್ಣಿಡುವುದು ಕಷ್ಟ.ಮನಸ್ಸು ತಿಳಿಯಾಗಿದ್ದಾಗಲೇ ಶಾಂತಿ ದೊರಕುವುದೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಬದುಕಿನ ಸುಖಕ್ಕೆ ಶಾಂತಿಯೇ ಮೂಲಕಾರಣವೆಂದು ಭಗವದ್ಗೀತೆಯಲ್ಲಿ ಹೇಳಿದೆ.ಮನಸ್ಸು ಶುದ್ಧ ಮತ್ತು ಶಾಂತವಾಗಿದ್ದಾಗ ಮಾತ್ರ ಸುಖದ ಕಲ್ಪನೆ ಮೂಡಲು ಸಾಧ್ಯ. ಮನಸ್ಸು ಒಂದು ವಿಚಿತ್ರ ಮತ್ತು ವಿಶೇಷ.ಅದನ್ನು ಅರ್ಥಮಾಡಿಕೊಂಡು ನಿರ್ವಹಿಸಲು ಕಲಿಯಬೇಕು. ನಾನು ಬಯಸಿದ್ದು ಸಿಗುತ್ತದೆ ಇಲ್ಲವೋ ಎನ್ನುವ ಆತಂಕ, ಸಿಕ್ಕಿದ್ದು ಎಲ್ಲಿ ಕಳೆದು ಹೋಗುತ್ತದೆ ಎನ್ನುವ ಭಯ ಮತ್ತು ಆತಂಕ ಕಾಡುತ್ತಾ ಮನಸ್ಸಿನ ಶಾಂತಿಯನ್ನು ಕೆಡಿಸುತ್ತದೆ.ಕಾಮ,ಕ್ರೋಧ, ಲೋಭ, ಮೋಹ,ಮದ,ಮತ್ಸರ ಎಂಬ ಆರು ವೈರಿಗಳಿಂದ ಮುಕ್ತವಾಗಿರುವ ಮಗುವು ಯಾವ ರೀತಿಯಲ್ಲಿ ಆನಂದವಾಗಿರುತ್ತದೆ ಇದು ನಮಗೆ ಪಾಠವಾಗಬೇಕು.

” ಮಲವಿರದ ಮೈಯಿರದು ಕೊಳೆಯಿರದ ಮನವಿರದು|
ಗಳಿಗೆ ಗಳಿಗೆಯು ಬೆವರೆ ಬಾಳ್ವಿಕೆಯ ಕುರುಹು|
ಕೊಳೆವುದಚ್ಚರಿಯಲ್ಲ ಕೊಳೆಯದಿಹುದಚ್ಚರಿಯೊ|
ಜಳಕವಾಗಿಸು ಬಾಳ್ಗೆ- ಮರುಳಮುನಿಯ”
ಎಂಬಂತೆ ಹೊಲಸಾಗದ ದೇಹವಿಲ್ಲ. ಕಲ್ಮಶವಾಗದ ಮನಸ್ಸು ಇಲ್ಲ.ಕ್ಷಣಕ್ಷಣಕ್ಕೂ ದೇಹ ಬೆವರುವುದು ಜೀವಂತಿಕೆಗೆ ಸಾಕ್ಷಿ. ಹೀಗೆ ಮನಸ್ಸು ಮತ್ತು ದೇಹ ಸದಾ ಕೊಳೆಯಾಗುತ್ತಾ ಇರುತ್ತದೆ. ಈ ಕೊಳೆಯನ್ನು ತೊಳೆಯಲು ನಾವು ನಿರಂತರವಾಗಿ ದೇಹ ಮಾತ್ರವಲ್ಲ ಮನಸ್ಸಿಗೂ ಸ್ನಾನ ಮಾಡಿಸುತ್ತಾ ಇರಬೇಕು.ಇಂದ್ರಿಯಾದಿ ಕಾಮನೆಗಳಿಗೆ ಮನಸ್ಸು ಸಿಲುಕದ ಹಾಗೆ ಜಾಗ್ರತೆ ವಹಿಸಬೇಕು.ಮನಸ್ಸನ್ನು ಕಾಡುವ ಚಂಚಲತೆ,ಚಿಂತೆ, ಭಯ,ಆತಂಕ, ಉದ್ವೇಗ, ಕೋಪ ಇತ್ಯಾದಿಗಳನ್ನು ನಿಗ್ರಹಿಸಲು ದೇವರ ಪೂಜೆ,ಭಜನೆ, ಧ್ಯಾನ, ಪ್ರಾಣಾಯಾಮ, ಸಂಗೀತ, ನೃತ್ಯ, ಇತ್ಯಾದಿ ಸತ್ಕರ್ಮಗಳಿಂದ ಮನಸ್ಸಿಗೆ ಸ್ನಾನ ಮಾಡಿಸಬೇಕು.
“ನೂರೊಂದು ಭಾವದಲೆ ತೇಲುವುದು ಮನದೊಳಗೆ|
ಆಘಾತ ಅದರಿಂದ ಆಗಾಗ ನಮಗೆ|
ಬೇಡದುದ ಹೊರಹಾಕಿ ಸುಂದರತೆಗಣಿಮಾಡು|
ಕಸದ ಬುಟ್ಟಿಯೆ ಮನಸು?- ಮುದ್ದುರಾಮ”
ಎಂಬ ಕವಿ ಕೆ. ಶಿವಪ್ಪನವರು ಹೇಳುವಂತೆ ಮನಸ್ಸನ್ನು ಬೇಡದ್ದನ್ನು ಹಾಕುವ ಕಸದ ಬುಟ್ಟಿಯಾಗಿಸದೆ ಕಸವನ್ನೆಲ್ಲಾ ಹೊರಹಾಕಿ ಪರಿಶುದ್ಧ ಸೌಂದರ್ಯಕ್ಕೆ ಮನಸ್ಸನ್ನು ಸಿದ್ಧ ಮಾಡಿದಾಗ ಬದುಕಿನಲ್ಲಿ ಸುಖಶಾಂತಿಯನ್ನು ಪಡೆದು ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ, ಕಾರ್ಕಳ ಘಟಕ

ಪ್ರಭಾಕರ ಶೆಟ್ಟಿ ಕೊಂಡಳ್ಳಿ