ಬೆಂಗಳೂರು: ವಿವಿಧ ನಗರಗಳಿಗೆ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಪೂರೈಸುವ ಬೃಹತ್ ಜಾಲವೊಂದನ್ನು ಬೇಧಿಸಿರುವ ಬೆಂಗಳೂರು ಪೊಲೀಸರು ಮಂಗಳೂರಿನ ಇಬ್ಬರು ಸೇರಿ 7 ಮಂದಿಯನ್ನು ಬಂಧಿಸಿದ್ದಾರೆ. ಕೆ.ಆರ್.ಅರವಿಂದ್, ಪವನ್ ಕುಮಾರ್, ಅಮ್ಜದ್ ಇತಿಯಾರ್ ಅಲಿಯಾಸ್ ಇಮ್ರಾನ್ ಅಲಿಯಾಸ್ ಇರ್ಷಾದ್, ಭಾಲ್ಕಿ ಪ್ರಭು, ನಜೀಮ್, ಪತ್ತಿಸಾಯಿ ಚಂದ್ರಪ್ರಕಾಶ್ ಸೆರೆಯಾಗಿರುವ ಆರೋಪಿಗಳು. ಈ ಪೈಕಿ ಅಮ್ಜದ್ ಮತ್ತು ನಜೀಮ್ ಮಂಗಳೂರಿನವರು.
ಏಳು ಮಂದಿ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ , ಹತ್ಯಾ ಯತ್ನ, ಡ್ರಗ್ ಸಾಗಾಟ, ದರೋಡೆ ಸಹಿತ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀದರ್ ಮತ್ತಿತರೆಡೆಯಿಂದ ಗಾಂಜಾ ತಂದು ಬೆಂಗಳೂರು, ಮಂಗಳೂರು ಮತ್ತಿತರ ನಗರಗಳಿಗೆ ಪೂರೈಸುತ್ತಿದ್ದರು. ಎಲ್ಲೆಡೆ ಅವರ ಸಂಪರ್ಕ ಜಾಲವಿದ್ದು, ಇದೊಂದು ಬೃಹತ್ ತಂಡ. ಅವರ ಕಾರ್ಯ ವ್ಯಾಪ್ತಿ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಷ್ಪಾ ಚಿತ್ರ ಪ್ರೇರಣೆ
ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿರುವ ಪುಷ್ಪಾ ಸಿನೇಮಾದಿಂದ ಪ್ರೇರಣೆ ಪಡೆದು ಅವರು ಡ್ರಗ್ ಸಾಗಾಟ ಮಾಡುತ್ತಿದ್ದರು. ವಾಹನದ ಅಡಿಯಲ್ಲಿ ಪ್ರತ್ಯೇಕ ಬಾಕ್ಸ್ ಅಳವಡಿಸಿ ಅದರಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದರು.
