ಕಾರ್ಕಳ : ಶಿವಪುರ ಗ್ರಾಮದ ಕೆರೆಬೆಟ್ಟು ಅಂಗನವಾಡಿ ನೂತನ ಕಟ್ಟಡವನ್ನು ಶನಿವಾರ ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೆರೆಬೆಟ್ಟು ಅಂಗನವಾಡಿ ಕೇಂದ್ರವನ್ನು ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಅಂಗನವಾಡಿ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಭದ್ರ ಅಡಿಪಾಯ ಒದಗಿಸಿಕೊಡಲಿ ಎಂದರು.
ಸದಸ್ಯರ ಕಳಕಳಿ
ಗ್ರಾ.ಪಂ. ಸದಸ್ಯರು ಸಮಾಜದ ಕುರಿತು ಪ್ರಾಮಾಣಿಕ ಕಳಕಳಿ ಹೊಂದಿದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ. ಶಿವಪುರ ಗ್ರಾ.ಪಂ. ಸದಸ್ಯರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದರ ಪರಿಣಾಮ ಗ್ರಾಮ ಅಭಿವೃದ್ಧಿಗೊಳ್ಳುತ್ತಿದೆ. ಶಾಲೆಗೆ ಮೂಲಭೂತ ಸೌಕರ್ಯ ಸೇರಿದಂತೆ ಈ ಭಾಗದ ಎಲ್ಲ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಸುನೀಲ್ ಕುಮಾರ್ ಕಿಂಡಿ ಅಣೆಕಟ್ಟು ನಿರ್ಮಾಣದಿಂದಾಗಿ ಶಿವಪುರ, ಮಿಯ್ಯಾರು, ನಂದಳಿಕೆ, ಬೋಳ ಗ್ರಾಮದಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿದೆ ಎಂದರು.
ಹೆಬ್ರಿ ತಹಶೀಲ್ದಾರ್ ಕೆ. ಪುರಂದರ, ಇಒ ಶಶಿಧರ್, ಶಿವಪುರ ಗ್ರಾ.ಪಂ. ಅಧ್ಯಕ್ಷ ಶೇಖರ್ ಶೆಟ್ಟಿ, ಹೆಬ್ರಿ ತಾ.ಪಂ. ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಶಿವಪುರ, ಗ್ರಾ.ಪಂ. ಉಪಾಧ್ಯಕ್ಷೆ ಶ್ವೇತಾ ರಾಘವೇಂದ್ರ, ಸದಸ್ಯೆ ಜ್ಯೋತಿ ಕುಲಾಲ್, ಉದ್ಯಮಿ ಗುರುದಾಸ್ ಶೆಣೈ, ಸಿಡಿಪಿಒ ಉಮೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯ ಶಂಕರ್ ಬಡೆಕ್ಕಿಲ್ಲಾಯ ಸ್ವಾಗತಿಸಿ, ಸುರೇಶ್ ಶೆಟ್ಟಿ ಶಿವಪುರ ಪ್ರಾಸ್ತವಿಕ ಮಾತುಗಳನ್ನಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಸುಚಿತ್ರಾ ನಿರೂಪಿಸಿ, ಮಂಜುಳಾ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಬಾಲವನ ಅಭಿವೃದ್ಧಿ ಸಮಿತಿ, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.