Homeದೇಶಸಚಿವನ ಆಪ್ತೆಯ ಮನೆಯಲ್ಲಿ ಮೂಟೆಗಟ್ಟಲೆ ನೋಟಿನ ಬಂಡಲ್‌! : ಪ್ರಾಥಮಿಕ ತನಿಖೆಯಲ್ಲಿ ಕನಿಷ್ಠ 20 ಕೋಟಿ.ರೂ....

Related Posts

ಸಚಿವನ ಆಪ್ತೆಯ ಮನೆಯಲ್ಲಿ ಮೂಟೆಗಟ್ಟಲೆ ನೋಟಿನ ಬಂಡಲ್‌! : ಪ್ರಾಥಮಿಕ ತನಿಖೆಯಲ್ಲಿ ಕನಿಷ್ಠ 20 ಕೋಟಿ.ರೂ. ಪತ್ತೆ


ಕೋಲ್ಕತ್ತ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿಯವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಿಂದ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ಸುಮಾರು 20 ಕೋ.ರೂ. ಪಾರ್ಥ ಚಟರ್ಜಿಗೆ ಸೇರಿದ ಹಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಶುಕ್ರವಾರದಿಂದೀಚೆಗೆ ಇ.ಡಿ.ಅಧಿಕಾರಿಗಳು ಪಾರ್ಥ ಚಟರ್ಜಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ದಾಳಿ ಮಾಡಿದಾಗ 20 ಕೋ.ರೂ. ನಗದು ಪತ್ತೆಯಾಗಿದೆ. ಮೂಟೆ ಕಟ್ಟಿ ಇಟ್ಟಿದ್ದ ನೋಟಿನ ಬಂಡಲ್‌ಗಳನ್ನು ನೋಡಿ ಇ.ಡಿ. ಅಧಿಕಾರಿಗಳೇ ದಂಗಾಗಿದ್ದಾರೆ. ಎಲ್ಲ 2000 ರೂ. ನೋಟಿನ ಕಟ್ಟುಗಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿಯ ನೇಮಕಾತಿ ಹಗರಣದ ವೇಳೆ ಸಂಗ್ರಹಿಸಲಾದ ಮೊತ್ತ ಇದು ಎನ್ನಲಾಗುತ್ತಿದೆ.
ದೀದಿಗೆ ಮುಜುಗರ
ಪರಿಶುದ್ಧ ಆಡಳಿತ ನೀಡುತ್ತಿದ್ದೇನೆ ಎಂದು ಹೇಳುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇ.ಡಿ. ತನಿಖೆಯಲ್ಲಿ ತನ್ನ ಸಂಪುಟ ಸಚಿವನ ಮನೆಯಲ್ಲಿ 20 ಕೋ.ರೂ. ನಗದು ಪತ್ತೆಯಾಗಿರುವುದು ತೀವ್ರ ಮುಜುಗರವುಂಟು ಮಾಡಿದೆ. ಕೇಂದ್ರದ ದೊಡ್ಡ ಹುದ್ದೆಗೇರಬೇಕೆಂಬ ಹಂಬಲದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ಹವಣಿಸುತ್ತಿರುವ ದೀದಿ ಇ.ಡಿ. ದಾಳಿಯಿಂದ ತೀವ್ರ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದು ಪಾರ್ಥ ಚಟರ್ಜಿ ಒಬ್ಬರ ಗಳಿಕೆ ಅಲ್ಲ, ಇದರ ಸೂತ್ರಧಾರರು ಬೇರೆಯೇ ಇದ್ದಾರೆ ಎನ್ನುವ ಮೂಲಕ ಬಿಜೆಪಿ ಪರೋಕ್ಷವಾಗಿ ಮಮತಾ ಬ್ಯಾನರ್ಜಿಯತ್ತ ಬೆರಳು ತೋರಿಸಿದೆ.
ಯಾರೀಕೆ ಅರ್ಪಿತಾ ಮುಖರ್ಜಿ?
ಪಾರ್ಥ ಚಟರ್ಜಿಯ ಪರಮಾಪ್ತೆ ಎಂದು ಹೇಳಲಾಗಿರುವ ಅರ್ಪಿತಾ ಮುಖರ್ಜಿ ಒಂದು ಕಾಲದಲ್ಲಿ ನಟಿಯಾಗಿದ್ದರು. ಬಂಗಾಳಿ ಸಿನೇಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಾರ್ಥ ಚಟರ್ಜಿಯ ಸಂಪರ್ಕಕ್ಕೆ ಬಂದ ಬಳಿಕ ಅಭಿನಯ ಬಿಟ್ಟಿದ್ದರು. ಅವರ ಸಂಬಂಧದ ಬಗ್ಗೆಯೂ ಗುಸುಗುಸು ಇದೆ. ಪಾರ್ಥ ಚಟರ್ಜಿ ಪದೇ ಪದೆ ಅರ್ಪಿತಾ ಮನೆಗೆ ಭೇಟಿ ನೀಡಿದ ದಾಖಲೆ ಇ.ಡಿ. ಅಧಿಕಾರಿಗಳಿಗೆ ಸಿಕ್ಕಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!