ನವದೆಹಲಿ : ಈ ವರ್ಷದ ಸ್ವಾತಂತ್ರ್ಯೋತ್ಸವ ವಿಶೇಷವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಎಂದು ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಪ್ರತಿ ಮನೆಯಲ್ಲಿ ತಿರಂಗ ಅಭಿಯಾನವನ್ನು ಬಲಪಡಿಸಿ, ಆ.13 ರಿಂದ 15 ರವರೆಗೆ ತ್ರಿವರ್ಣ ಧ್ವಜವನ್ನು ನಿಮ್ಮ ಮನೆಯಲ್ಲಿ ಹಾರಿಸಿ ಅಥವಾ ಪ್ರದರ್ಶಿಸಿ, ಈ ಅಭಿಯಾನ ರಾಷ್ಟ್ರಧ್ವಜದ ಮೇಲೆ ಭಾರತೀಯರ ಸಂಬಂಧವನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ.
ಜುಲೈ 22 ಇತಿಹಾಸದಲ್ಲಿ ವಿಶೇಷ ದಿನ
ಇಂದು ಜುಲೈ 22 ದೇಶದ ಇತಿಹಾಸದಲ್ಲಿ ವಿಶೇಷ ದಿನ. 1947ರಲ್ಲಿ ಇದೇ ದಿನ ನಮ್ಮ ರಾಷ್ಟ್ರಧ್ವಜವನ್ನು ಅಳವಡಿಸಿಕೊಳ್ಳಲಾಯಿತು. ನಮ್ಮ ತ್ರಿವರ್ಣಧ್ವಜದ ಜೊತೆ ಸಹಯೋಗ ಹೊಂದಿದ ಸಮಿತಿಯ ವಿವರ, ಪಂಡಿತ್ ಜವಹರಲಾಲ್ ನೆಹರೂ ಅವರು ಅನಾವರಣಗೊಳಿಸಿದ ತ್ರಿವರ್ಣಧ್ವಜ ಹೀಗೆ ಹಲವು ಆಸಕ್ತಿಕರ ವಿಷಯಗಳಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.ನಾವು ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿದ್ದಾಗ ಮುಕ್ತ ಭಾರತಕ್ಕಾಗಿ ಧ್ವಜದ ಕನಸು ಕಂಡವರೆಲ್ಲರ ಧೈರ್ಯ ಮತ್ತು ಪ್ರಯತ್ನಗಳನ್ನು ನಾವು ಇಂದು ನೆನಪಿಸಿಕೊಳ್ಳುತ್ತೇವೆ. ಅವರ ದೃಷ್ಟಿಕೋನವನ್ನು ಈಡೇರಿಸಲು ಮತ್ತು ಅವರ ಕನಸುಗಳ ಭಾರತವನ್ನು ನಿರ್ಮಿಸಲು ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಕೂಡ ಪ್ರಧಾನಿ ಹೇಳಿದ್ದಾರೆ.
