Sunday, October 2, 2022
spot_img
Homeಸ್ಥಳೀಯ ಸುದ್ದಿಮಾಳದ ಶೌಚಾಲಯ ಸಾರ್ವಜನಿಕರ ಬಳಕೆಗೆ ಸಿಗುವುದೆಂದು?

ಮಾಳದ ಶೌಚಾಲಯ ಸಾರ್ವಜನಿಕರ ಬಳಕೆಗೆ ಸಿಗುವುದೆಂದು?

ಕಾರ್ಕಳ : ಇದು ಮಾಳ ಗ್ರಾಮ ಪಂಚಾಯತ್ ವತಿಯಿಂದ ಮಾಳ ಮುಳ್ಳೂರು ಅರಣ್ಯ ಇಲಾಖೆಯ ತಪಾಸಣೆಯ ಕೇಂದ್ರದ ಬಳಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಾಲಯ. ಆದರೆ ಶೌಚಾಲಯ ಇದ್ದೂ ಇಲ್ಲದ ಹಾಗೆ ಆಗಿದೆ. ಜನರು ಈಗಲೂ ಬಹಿರ್ದೆಸೆ ತೀರಿಸಲು ಗಿಡ, ಮರಗಳು, ಪೊದೆಗಳ ಮರೆಗೆ ಹೋಗುವುದ ತಪ್ಪಿಲ್ಲ.
ಹೊರನಾಡು, ಕಳಸ, ಕುದುರೆಮುಖ, ಶೃಂಗೇರಿಯಿಂದ ಕಾರ್ಕಳ, ಉಡುಪಿ, ಮಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಮಾಳ ಮುಳ್ಳೂರು ಬಳಿ ಒಂದು ಅರಣ್ಯ ತಪಾಸಣೆ ಕೇಂದ್ರ ಇದ್ದು, ಈ ರಸ್ತೆಯಲ್ಲಿ ನೂರಾರು ವಾಹನಗಳು ನಿತ್ಯ ಓಡಾಡುತ್ತವೆ. ಮಾಳ ಘಾಟಿಯ ಪ್ರವೇಶದಲ್ಲಿರುವ ಈ ಊರಿನಲ್ಲಿ ವಾಹನಗಳು ಘಾಟಿ ಹತ್ತಲು ಶುರು ಮಾಡುವುದಕ್ಕಿಂತ ಮುಂಚೆ ವಾಹನ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಘಾಟಿ ಪ್ರವೇಶಿಸದ ಸಮಯವನ್ನು ದಾಖಲಿಸಿದ ಒಂದು ಸಣ್ಣ ಚೀಟಿಯನ್ನು ಪಡೆದುಕೊಳ್ಳಬೇಕು. ಹೀಗಾಗಿ ಇಲ್ಲಿ ಎಲ್ಲ ವಾಹನಗಳು ತುಸು ಹೊತ್ತು ನಿಲ್ಲುವುದು ಅನಿವಾರ್ಯ. ಇಲ್ಲಿಂದ ಘಾಟಿ ಹತ್ತಲು ಪ್ರಾರಂಭಿಸಿದರೆ ಎಸ್‌. ಕೆ. ಬಾರ್ಡರ್‌ ತನಕ ಘಾಟಿ ಮಧ್ಯೆ ಎಲ್ಲೂ ವಾಹನ ನಿಲ್ಲಿಸುವಂತಿಲ್ಲ. ಹೀಗಾಗಿ ಹೆಚ್ಚಿನವರು ಮಾಳದಲ್ಲಿಯೇ ವಾಹನಗಳನ್ನು ನಿಲ್ಲಿಸಿ ಉಪಹಾರ ಊಟ ಸೇವಿಸಿ ಮುಂದಕ್ಕೆ ಪಯಣ ಬೆಳೆಸುತ್ತಾರೆ. ಇಂಥ ಸಂದರ್ಭದಲ್ಲಿ ಬಹಿರ್ದೆಸೆಗೆ ಹೋಗುವುದ ಸಹಜ ಪ್ರಕ್ರಿಯೆ. ಆದರೆ ಮಾಳದಲ್ಲಿ ಎಲ್ಲೂ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲ. ಪುರುಷರಾದರೆ ಮರಗಿಡ, ಪೊದೆಗಳ ಮರೆಗೆ ಹೋಗುತ್ತಾರೆ. ಆದರೆ ಮಹಿಳೆಯರು ಬಹಳ ಸಂಕಷ್ಟ ಅನುಭವಿಸಬೇಕಾಗುತ್ತದೆ.
ಹಿಂದಿನ ಪಂಚಾಯತ್ ಅಧ್ಯಕ್ಷರು ಮತ್ತು ಅಧಿಕಾರಿಗಳ ಮುತುವರ್ಜಿಯಿಂದ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಾಣವೇನೋ ಆಗಿದೆ. ಆದರೆ ಅದು ಇನ್ನೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ನಿರ್ಮಾಣ ಕಾರ್ಯ ಸಂಪೂರ್ಣ ಆಗುವ ಮೊದಲೇ ಹಿಂದಿನ ಅಧ್ಯಕ್ಷರ ಅವಧಿ ಮುಕ್ತಾಯ ಆಗಿತ್ತು. ಮಾಳ ಗ್ರಾಮ ಪಂಚಾಯತ್‌ನಲ್ಲಿ ಈಗ ಅಧಿಕಾರ ಕೈ ಬದಲಾಗಿದೆ. ಹೀಗಾಗಿ ಶೌಚಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಲು ವಿಶೇಷ ಕಾಳಜಿ ತೋರಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ಸಾರ್ವಜನಿಕರ ತೆರಿಗೆಯ ಹಣದಿಂದ ನಿರ್ಮಾಣವಾಗಿರುವ ಈ ಶೌಚಾಲಯ ಕೊನೆಯ ಹಂತದ ಒಂದಿಷ್ಟು ಕೆಲಸ ಕಾರ್ಯ ಬಾಕಿ ಇದ್ದು ಅದನ್ನು ಪೂರ್ಣಗೊಳಿಸಿದರೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತದೆ.
ಶೌಚಾಲಯ ನಿರ್ಮಾಣಕ್ಕೆ ಲಕ್ಷ ಲಕ್ಷ ಹಣ ವ್ಯಯಿಸಿ ಅದರ ಉಪಯೋಗ ಸಾರ್ವಜನಿಕರಿಗೆ ಸಿಗುತ್ತಿಲ್ಲ ಅಂದರೆ ಯಾವ ಪುರುಷಾರ್ಥ ಸಾಧನೆಗಾಗಿ ಇದನ್ನು ಮಾಡಿರುವುದು ಅನ್ನುವುದು ಯಕ್ಷ ಪ್ರಶ್ನೆ. ಯಾವುದಾದರೂ ಕಾನೂನಿನ ತೊಡುಕುಗಳು ಇದ್ದಲ್ಲಿ ಹಾಗೂ ಸಾರ್ವಜನಿಕರ ಸಹಕಾರ ಇಲ್ಲವಾದಲ್ಲಿ ಇವೆಲ್ಲವನ್ನೂ ಸರಿದೂಗಿಸಿಕೊಂಡು ರಾಜಕೀಯ ರಹಿತವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಾನವೀಯ ನೆಲೆಯಲ್ಲಿ ತೀರಾ ಅಗತ್ಯ ಇರುವ ಈ ಕಾರ್ಯವನ್ನು ಸಂಪೂರ್ಣಗೊಳಿಸಿ ಸರ್ವರಿಗೂ ಇದರ ಉಪಯೋಗ ಆಗುವಂತೆ ಮಾಡಿಕೊಡಿ ಅನ್ನುವುದು ಈ ಮೂಲಕ ವಿನಂತಿ. ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈಗಾಗಲೇ ಪಂಚಾಯತಿಗೆ ಮತ್ತೆ ಮತ್ತೆ ಹೋಗಿ ಮನವಿ ಮಾಡಿಕೊಂಡರು ಕೂಡ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಈ ಸಮಸ್ಯೆಯನ್ನು ತಾವು ಯಾರ ಬಳಿ ತಿಳಿಸಿದರೆ ಅದು ಸರಿಯಾಗುತ್ತದೆ ಅನ್ನುವುದು ಗೊತ್ತಾಗುವುದಿಲ್ಲ ಅಂತ ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸತೀಶ್ ಕಾತ್ಯಾಯಿನಿ,‌ ಕಾರ್ಕಳ

LEAVE A REPLY

Please enter your comment!
Please enter your name here

Most Popular

error: Content is protected !!