Saturday, October 1, 2022
spot_img
Homeಸುದ್ದಿಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂದೆಗೆಯಲು ಬಿಪಿನ್‌ಚಂದ್ರ ಪಾಲ್‌ ನಕ್ರೆ ಒತ್ತಾಯ

ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂದೆಗೆಯಲು ಬಿಪಿನ್‌ಚಂದ್ರ ಪಾಲ್‌ ನಕ್ರೆ ಒತ್ತಾಯ

ಕಾರ್ಕಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಅಪ್ರಬುದ್ಧ ಆಡಳಿತ ವೈಖರಿ ಮತ್ತು ಅವೈಜ್ಞಾನಿಕ ಆರ್ಥಿಕ ನೀತಿಯಿಂದ ದೇಶವನ್ನು ದಿವಾಳಿಯ ಪಥಕ್ಕೆ ತಳ್ಳಿದೆ. ರಾಷ್ಟ್ರೀಯ ಆರ್ಥಿಕ ಕುಸಿತದಿಂದ ಉಂಟಾದ ಬರಿದಾದ ಖಜಾನೆಯನ್ನು ತುಂಬಲು ಇದೀಗ ಸರಕು ಮತ್ತು ಸೇವಾ ತೆರಿಗೆಯ ಹೆಸರಲ್ಲಿ ಬಡವರ ಬದುಕನ್ನು ಕಸಿದುಕೊಳ್ಳುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.
ಪೆಟ್ರೋಲ್, ಡೀಸೆಲ್, ಗ್ಯಾಸ್, ವಿದ್ಯುತ್ ಹಾಗೂ ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಕೈಗೆಟುಕದ ರೀತಿಯಲ್ಲಿ ಏರಿದ್ದು ಇದೀಗ ಜಿಎಸ್‌ಟಿ ಕೌನ್ಸಿಲ್ ನಿರ್ಣಯದ ಹೆಸರಲ್ಲಿ ಮತ್ತೆ ಅಹಾರ ಪದಾರ್ಥಗಳು ಮುಖ್ಯವಾಗಿ ಹಾಲು, ಮೊಸರು, ಮಂಡಕ್ಕಿ, ಅವಲಕ್ಕಿ, ಅಕ್ಕಿ, ಮೊದಲಾದ ದೈನಂದಿನ ಆಹಾರ ಪದಾರ್ಥಗಳು ಹಾಗೂ ಎಳನೀರು, ಸೋಲಾರ್ ವಾಟರ್ ಹೀಟರ್, ಎಲ್ಇಡಿ ಬಲ್ಬ್‌ ಮತ್ತು ಇತರ ಪರ್ಯಾಯ ವಿದ್ಯುತ್ ಉಳಿತಾಯ ಸರಕುಗಳೂ ಸೇರಿ ಸುಮಾರು 32 ಆದ್ಯತಾ ವಲಯದ ಪ್ರಮುಖ ಸರಕುಗಳ ಮೇಲೆ ಶೇ.5 ರಿಂದ ಶೇ.18 ವರೆಗೆ ತೆರಿಗೆ ಹೇರುವ ಮೂಲಕ ಸರಕಾರ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮಂದಿಯ ಬದುಕನ್ನು ದುರಂತದತ್ತ ತಳ್ಳಿದೆ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿಪಿನ್‌ಚಂದ್ರ ಪಾಲ್‌ ನಕ್ರೆ ಹೇಳಿದ್ದಾರೆ.
ದೇಶದ ಆರ್ಥಿಕ ನೀತಿಯ ವೈಫಲ್ಯದ ಪರಿಣಾಮವಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಸುಮಾರು ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಪರಿಣಾಮವಾಗಿ ಜನರ ಖರೀದಿಸುವ ಶಕ್ತಿ ಕುಸಿತಗೊಂಡಿದೆ. ಇದೀಗ ಮತ್ತೆ ಜಿಎಸ್‌ಟಿ ಹೇರಿಕೆಯ ಪರಿಣಾಮವಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರ ಕೂಡಲೇ ದೈನಂದಿನ ಬಳಕೆಯ ಆದ್ಯತಾ ವಲಯದ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಬಿಪಿನ್‌ಚಂದ್ರ ಪಾಲ್ ನಕ್ರೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!