ಕಾರ್ಕಳ : ಡೀಮ್ಡ್ ಫಾರೆಸ್ಟ್ ಮತ್ತು ಕಸ್ತೂರಿ ರಂಗನ್ ವರದಿ ವಿಚಾರ ಸುಪ್ರಿಂಕೋರ್ಟಿನ ಹಸಿರು ಪೀಠದಲ್ಲಿರುವ ಕಾರಣ ಹಕ್ಕು ಪತ್ರ ನೀಡುವುದು ಊರ್ಜಿತವಲ್ಲ. ಇದೇ ವಿಚಾರವಾಗಿ ಕಾರ್ಕಳ ತಾಲೂಕಿನಲ್ಲಿದ್ದ ತಹಶೀಲ್ದಾರ್ ಗುರುಪ್ರಸಾದ್ ಈ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಹಕ್ಕು ಪತ್ರ ನೀಡಿ ಇದೀಗ ತನಿಖೆ ಎದುರಿಸುತ್ತಿದ್ದಾರೆ. ಪಸ್ತುತ ಡೀಮ್ಡ್ ಎಂದು ಗುರುತಿಸಿದ್ದ ಅರಣ್ಯ ಭೂಮಿಗೂ ಹಕ್ಕು ಪತ್ರ ನೀಡುವ ಮೂಲಕ ಈಗಿರುವ ತಹಶೀಲ್ದಾರ್ ಕೂಡ ಅದೇ ಕಾರ್ಯವನ್ನು ಮುಂದುವರಿಸಿದ್ದಾರೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಹೇಳಿದರು.
ಅವರು ಮಂಗಳವಾರ ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಇಂಧನ ಮಂತ್ರಿ ಸುನೀಲ್ ಕುಮಾರ್ ಇದೀಗ ಚುನಾವಣೆಯ ದೃಷ್ಟಿಯಿಂದ ಅಧಿಕಾರಿಗಳನ್ನು ದಾರಿ ತಪ್ಪಿಸಿ ಜನರನ್ನು ಮರಳು ಮಾಡುತ್ತಿದ್ದಾರೆ. ಸರಕಾರಿ ಅಧಿಕಾರಿಗಳ ಮೂಲಕ ವಂಚಿಸುವ ಹುನ್ನಾರ ಮಾಡುತ್ತಿರುವುದು ಜನತೆಗೆ ಬಗೆಯುವ ದ್ರೋಹವೆಂದರು.
ಶಿಕ್ಷಣ, ಆರೋಗ್ಯ ಮತ್ತು ಸಾಂವಿಧಾನಿಕ ಹಕ್ಕನ್ನು ಕಾಂಗ್ರೆಸ್ ರಕ್ಷಣೆ ಮಾಡಿದೆ. ಆಗಿನ ಶಾಸಕರಾಗಿದ್ದ ಗೋಪಾಲ ಭಂಡಾರಿ ಮತ್ತು ವೀರಪ್ಪ ಮೊಯಿಲಿಯವರು ಸುಧಾರಣೆ ಮಾಡಿ ಹಕ್ಕು ಪತ್ರ ನೀಡಿ ಉತ್ತಮ ಆಡಳಿತ ನಡೆಸಿದ ದಾಖಲೆ ಇದೆ. ಮೂರು ವರ್ಷದಿಂದ ಶಾಸಕರಾಗಿ ಇದೀಗ ಸಚಿವರಾಗಿ ಸುನೀಲ್ ಕುಮಾರ್ ಮಾಡಿರುವ ಸಾಧನೆಯಾದರೂ ಏನು ? ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.
ಕಾಂಗ್ರೆಸ್ ಸವಾಲು
ಅನ್ನಕ್ಕೂ ತೆರಿಗೆ, ಕುಡಿಯುವ ಹಾಲಿಗೂ ತೆರಿಗೆ, ರೋಗಿಗಳಿಗೂ ತೆರಿಗೆ, ಹೆಣಕ್ಕೂ ತೆರಿಗೆ ವಿಧಿಸುವ ಬಿಜೆಪಿ ಸರಕಾರ ಏನು ಸುಧಾರಣೆ ಮಾಡಿದೆ ? ಕಾಂಗ್ರೆಸ್ ಮಾಡಿದ ಆರ್ಥಿಕತೆಯ ಸುಧಾರಣೆಯನ್ನು ಸರ್ವನಾಶ ಮಾಡಿ ಎಲ್ಲವನ್ನೂ ಮಾರಾಟ ಮಾಡುವ ಹಂತದಲ್ಲಿದೆ ಇವರ ಸರಕಾರ. ಇದಕ್ಕೆ ಸಾರ್ವಜನಿಕವಾಗಿ ಸುನಿಲ್ ಕುಮಾರ್ ಚರ್ಚೆಗೆ ಬರಲಿ. ಕಾಂಗ್ರೆಸ್ನವರೂ ಬರುತ್ತಾರೆ ಎಂದು ಮಂಜುನಾಥ ಪೂಜಾರಿ ಸವಾಲು ಹಾಕಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜನಾರ್ಧನ್ ಉಪಸ್ಥಿತರಿದ್ದರು.