ಬೆಂಗಳೂರು: ಆನೆ ಕೊಂದ ಆರೋಪಿಗಳನ್ನು ಬಚಾವ್ ಮಾಡಲು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಿಸಿದ್ದಾರೆ. ಆನೆ ಹಂತಕರು ಜೆಡಿಎಸ್ ಬೆಂಬಲಿಗರಾಗಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕುವಂತೆ ಸ್ಥಳೀಯ ಸಂಸದ ಪ್ರಜ್ವಲ್ ರೇವಣ್ಣ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಮನೇಕಾ ಹೇಳಿದ್ದಾರೆ.
ವಿದ್ಯುತ್ ತಂತಿ ತಗುಲಿ ಆನೆ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಈ ಪತ್ರ ಬರೆದಿದ್ದಾರೆ.
ಇಡೀ ಪ್ರಕರಣವನ್ನು ಹಾಸನ ಅರಣ್ಯ ಇಲಾಖೆಯಿಂದ ವಿಜಿಲೆನ್ಸ್ ಇಲಾಖೆಗೆ ತನಿಖೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿದ್ದಾರೆ.
2021ರಲ್ಲಿ ಹಾಸನದ ರೈತನೊಬ್ಬ ಆನೆಗೆ ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿ ದಂತ ತೆಗೆದು ಹೂತು ಹಾಕಿದ್ದರು. ಅಲ್ಲಿ ಜೆಸಿಬಿಯಿಂದ ಅಗೆದು ನೋಡಿದಾಗ 10 ಅಡಿಯಲ್ಲಿ ಆನೆಯ ದೇಹ ಪತ್ತೆಯಾಗಿತ್ತು ಎಂದು ಮನೇಕಾ ಗಾಂಧಿ ಪತ್ರದಲ್ಲಿ ತಿಳಿಸಿದ್ದಾರೆ.
ಹಾಸನ ಆರ್ಎಫ್ಒ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ತಮ್ಮ ದೂರಿನಲ್ಲಿ ಮನೇಕಾ ಗಾಂಧಿ ಉಲ್ಲೇಖ ಮಾಡಿದ್ದಾರೆ. ಮಾತ್ರವಲ್ಲದೆ ಹಾಸನ ರೇಂಜ್ ಆಫೀಸರ್ ಬಗ್ಗೆ ಸೂಕ್ತ ತನಿಖೆ ಮಾಡಲು ಮನವಿ ಕೂಡ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಅರಣ್ಯ ಸಿಬ್ಬಂದಿ ತಪ್ಪಿತಸ್ಥರು ಎಸ್ಕೇಪ್ ಆಗಲು ಸಹಾಯವಾಗುವಂತೆ ಬೇರೆ ಇಬ್ಬರನ್ನು ಬಂಧಿಸಿದ್ದಾರೆ, ಆರೋಪಿಯು ಎರಡು ವಿಭಿನ್ನ ಸಂಸ್ಥೆಗಳಿಂದ ಕಾಮಗಾರಿಗಳನ್ನು ನಕಲು ಮಾಡಿರುವುದಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಜಾಮೀನು ಪಡೆದಿದ್ದಾರೆ. ಆರ್ಎಫ್ಒ ಹಾಸನ ಕಾನೂನು ಪಾಲಿಸುತ್ತಿಲ್ಲ ಎಂದು ಮೇನಕಾ ಆರೋಪಿಸಿದ್ದಾರೆ.
