ಉಡುಪಿ : ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಿಗೆ ಶಿಕ್ಷಣ ಇಲಾಖೆಯು ಎಲ್ಲ ವಿಶ್ವ ವಿದ್ಯಾನಿಲಯಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸುವಂತೆ ಸುತ್ತೋಲೆ ಹೊರಡಿಸಿದೆ. ಸ್ವಾತಂತ್ರ್ಯ ಹೋರಾಟದ ಕುರಿತು ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪೇಂಟಿಂಗ್, ದೇಶಭಕ್ತಿ ಗೀತೆ, ಕಿರು ನಾಟಕ, ಪೋಸ್ಟರ್ ಸಿದ್ಧಪಡಿಸುವುದು, ಸ್ವಾತಂತ್ರ್ಯ ಓಟ ಸ್ಪರ್ಧೆಯನ್ನು ಆಯೋಜನೆ ಮಾಡುವ ಕುರಿತು ಹಾಗೂ ನುರಿತ ಭಾಷಣಕಾರರಿಂದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ವಿಶೇಷ ಉಪನ್ಯಾಸ, ಸ್ವಾತಂತ್ರ್ಯ ಹೋರಾಟಗಾರರಿದ್ದರೆ ಅವರನ್ನು ಸಂಸ್ಥೆಗೆ ಕರೆದು ಅವರ ಅನುಭವ ಹಂಚಿಕೊಳ್ಳಲು ವ್ಯವಸ್ಥೆ ಮಾಡುವುದು, ಪ್ರಮುಖ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಚಾರಗೋಷ್ಠಿಗಳನ್ನು ಆಯೋಜನೆ ಮಾಡಲು ಸೂಚಿಸಲಾಗಿದೆ.
ಪ್ರತಿ ಕಾಲೇಜಿನಲ್ಲಿ ಸ್ಪರ್ಧೆ ನಡೆಸಿ ವಿಜೇತರ ಹೆಸರನ್ನು ಸಂಬಂಧಪಟ್ಟ ವಿಶ್ವ ವಿದ್ಯಾನಿಲಯಗಳ ಸಂಪರ್ಕಾಧಿಕಾರಿಗೆ ಕಳುಹಿಸಿ, ವಿ.ವಿ. ಹಂತದಲ್ಲಿ ಸ್ಪರ್ಧೆ ನಡೆಸಿ 5 ವಿಜೇತ ವಿದ್ಯಾರ್ಥಿಗಳನ್ನು ಅಂತರ್ ವಿ.ವಿ. ಮಟ್ಟದ ಸ್ಪರ್ಧೆ ನಡೆಸುವ ಅಧಿಕಾರಿಗಳಿಗೆ ಹೆಸರನ್ನು ಕಳುಹಿಸಿಕೊಡಬೇಕು. ಅಂತರ್ ವಿ.ವಿ.ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ 3 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಸೂಚಿಸಬೇಕು. ಆ.1 ರಿಂದ 10 ರವರೆಗೆ ರಾಜ್ಯಮಟ್ಟದ ಸ್ಪರ್ಧೆಯು ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ : ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಸ್ಪರ್ಧೆ
