ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಡಾ. ಕೃಷ್ಣಾನಂದ ಶೆಟ್ಟಿ ಮನವಿ
ಕಾರ್ಕಳ : ಸತತ ಮಳೆಯ ನಡುವೆಯೇ ಡೆಂಗ್ಯೂ ಮಹಾಮಾರಿಯ ಆರ್ಭಟವೂ ಶುರುವಾಗಿದೆ. ರಾಜ್ಯದಾದ್ಯಂತ 530 ಪ್ರಕರಣಗಳು ವರದಿಯಾಗಿದ್ದು, ಕಾರ್ಕಳದಲ್ಲೂ 37 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಜೂನ್ ತಿಂಗಳಿನಲ್ಲಿ ಹೆಬ್ರಿ ತಾಲೂಕಿನ ಮುನಿಯಾಲು 3, ಚಾರ ಹಾಗೂ ಬಜಗೋಳಿ ಗ್ರಾಮದಲ್ಲಿ 2, ಬೈಲೂರು, ಈದು, ದುರ್ಗಾ, ದೊಂಡೆರಂಗಡಿ, ಹಿರ್ಗಾನ, ಕುಕ್ಕುಂದೂರು, ಇರ್ವತ್ತೂರುವಿನಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ. ಜೂನ್ ಒಂದೇ ತಿಂಗಳಿನಲ್ಲಿ ಕಾರ್ಕಳ ಹೆಬ್ರಿ ಉಭಯ ತಾಲೂಕಿನಲ್ಲಿ 15 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಜನವರಿಯಿಂದ ಜೂನ್ವರೆಗೆ ಒಟ್ಟು 37 ಪ್ರಕಣ ದಾಖಲಾಗಿದೆ.
ಸಾಂಕ್ರಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆರೋಗ್ಯಾ ಇಲಾಖೆ ವತಿಯಿಂದ ಈಗಾಗಲೇ ವಿವಿಧ ಗ್ರಾಮಗಳಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡೆಂಗ್ಯೂ ಶಂಕಿತ ಅಥವಾ ಖಚಿತ ಪ್ರಕರಣ ಕಂಡುಬಂದಲ್ಲಿ ಅಂತಹ ಮನೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಭೇಟಿ ನೀಡಿ ಪರೀಕ್ಷೆಗೊಳಪಡಿಸುತ್ತಾರೆ.
ಸೊಳ್ಳೆ ಕಾಟ
ಈಡೀಸ್ ಈಜಿಪ್ಟೆ ಎಂದು ಕರೆಯಲ್ಪಡುವ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಹರಡುತ್ತದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಯ ಕಾಟವೂ ಅಧಿಕವಾಗಿದ್ದು, ಸೊಳ್ಳೆ ಕಡಿಯದಂತೆ ಸಾಕಷ್ಟು ಜಾಗರೂಕರಾಗಿರುವುದು ಅಗತ್ಯ. ಮೈತುಂಬಾ ಬಟ್ಟೆ ಧರಿಸುವುದು, ಬೇವಿನ ಹೊಗೆ ಹಾಕಿ ಸೊಳ್ಳೆ ಸುಳಿಯದಂತೆ ಮಾಡುವುದು, ಸೊಳ್ಳೆ ಉತ್ಪತ್ತಿ ತಾಣಗಳಾದ ಅಂದರೆ ನಿಂತ ನೀರಿನ ಮೇಲೆ ಸೀಮೆ ಎಣ್ಣೆ ಅಥವಾ ಇನ್ನಿತರ ಎಣ್ಣೆ ಸುರಿಯುವುದು, ಸೊಳ್ಳೆ ನಿರೋಧಕ ಪರದೆ ಬಳಸಿ ಸೊಳ್ಳೆಯಿಂದ ರಕ್ಷಣೆ ಪಡೆಯಬಹುದಾಗಿದೆ.
ಅಪಾಯಕಾರಿ
ಡೆಂಗ್ಯೂ ಜ್ವರ ಸಾಂಕ್ರಮಿಕ ರೋಗ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಡೆಂಗ್ಯೂ ಅಪಾಯಕಾರಿ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಹಿರಿಯರು, ರೋಗಿಗಳು ಸೊಳ್ಳೆ ಕಚ್ಚದಂತೆ ಎಚ್ಚರಿಕೆಯಿಂದ ಇರುವುದು ಅಗತ್ಯ.
ಸಹಾಯವಾಣಿ
ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಪಡೆಯಲು 08258 – 231788 ಅಥವಾ ಆರೋಗ್ಯ ಸಹಾಯವಾಣಿ 104 ನಂಬರ್ ಸಂಪರ್ಕಿಸಬಹುದಾಗಿದೆ.
ಜ್ವರ, ಮೈಕೈ ನೋವು, ಬೆನ್ನು ನೋವು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರೀಕ್ಷಿಸಿಕೊಳ್ಳಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಮೂಲಕ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು.
ಡಾ. ಕೃಷ್ಣಾನಂದ ಶೆಟ್ಟಿ
ತಾಲೂಕು ಆರೋಗ್ಯಾಧಿಕಾರಿ, ಕಾರ್ಕಳ
ವರದಿ : ಜ್ಯೋತಿ ರಮೇಶ್