Saturday, October 1, 2022
spot_img
Homeಅಂಕಣಕಗ್ಗದ ಸಂದೇಶ-ಕೊಡುವುದರಲ್ಲಿರುವ ಸುಖವ ಪಡೆದು ನೋಡಾ…

ಕಗ್ಗದ ಸಂದೇಶ-ಕೊಡುವುದರಲ್ಲಿರುವ ಸುಖವ ಪಡೆದು ನೋಡಾ…

“ನೆರಳಿನಿತನು ಕೊಡುವ, ದಣಿವನಿನಿತನು ಕಳೆವ|
ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ||
ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ|
ಪರಧರ್ಮವದೆಲವೊ–ಮಂಕುತಿಮ್ಮ||”

ಸ್ವಲ್ಪ ನೆರಳನ್ನು ನೀಡುವಂತಹ, ಆ ನೆರಳಿನ ತಂಪಿನಲ್ಲಿ ಕುಳಿತಾಗ ದೇಹದ ಆಯಾಸವನ್ನು ನೀಗುವ; ಧರೆಯ ಪ್ರಯಾಣದ ಭಾರವನ್ನು ಸ್ವಲ್ಪ ಕಡಿಮೆ ಮಾಡುವಂತಹ ಒಂದು ಗಿಡವಾಗಿ ಮನೆಯ ಒಳಗಡೆ ಅಥವಾ ಮನೆಯ ಹೊರಗಡೆ ಬೆಳೆಯುತ್ತಿದ್ದರೆ ಅದುವೇ ಶ್ರೇಷ್ಠ ಧರ್ಮ ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ. “ಪರೋಪಕಾರಾಯ ಫಲಂತಿ ವೃಕ್ಷಾಃ,
ಪರೋಪಕಾರಾಯ ವಹಂತಿ ನದ್ಯಃ,
ಪರೋಪಕಾರಾಯ ದುಹಂತಿ ಗಾವಃ,
ಪರೋಪಕಾರಾರ್ಥಂ ಇದಂ ಶರೀರಂ’

ಎಂಬ ಪ್ರಸಿದ್ಧ ಸುಭಾಷಿತ ಹೇಳುವಂತೆ ಮರಗಳು ಹಣ್ಣನ್ನು ಕೊಡುವುದು, ನದಿಗಳು ಹರಿಯುವುದು, ಹಸುಗಳು ಹಾಲನ್ನು ಕೊಡುವುದು ಪರೋಪಕಾರಕ್ಕಾಗಿ. ಅಂತೆಯೇ ಮನುಷ್ಯ ಜೀವನವೂ ಕೂಡ ಪರೋಪಕಾರಕ್ಕಾಗಿಯೇ ಮೀಸಲಿಡಬೇಕು. ನಾವು ಜಗತ್ತಿಗೆ ಏನನ್ನು ನೀಡುತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ ಎಂಬ ಮಾತಿದೆ. ಬದುಕಿನಲ್ಲಿ ಇತರರಿಗೆ ನಮ್ಮ ಕೈಲಾದಷ್ಟು ನೆರವನ್ನು ನೀಡಬೇಕು.ನೀಡುವುದರಲ್ಲಿರುವ ಸುಖ ಪಡೆಯುವುದರಲ್ಲಿ ಇರುವುದಿಲ್ಲ. ನೆರವನ್ನು ನೀಡುವ ಕೈ ಯಾವಾಗಲೂ ಮೇಲೆಯೆ ಇರುತ್ತದೆ.
‘ಬಗ್ಗಿ ತಾ ಕೈಕೊಟ್ಟು ಬಿದ್ದವರನೆತ್ತಿದರೆ,
ಎತ್ತರದ ಮನುಜ ನೀ ನೋವಿನಿಳೆಯಲ್ಲಿ,
ನೆರವು ಹರಿಗೋಲಾಗು ಸಂಕಟದ ನದಿಯಲಿ,
ಈಜು ಪರಹಿತಕಾಗಿ- ಮುದ್ದುರಾಮ’||

ಎಂಬ ಕವಿ ಕೆ.ಶಿವಪ್ಪನವರ ನುಡಿಯಂತೆ ಯಾರೂ ಕಷ್ಟದಲ್ಲಿರುವವರಿಗೆ ನೆರವಾಗುತ್ತಾರೋ ಅವರೆ ದೊಡ್ಡವರು, ಶ್ರೇಷ್ಠರು. ಪರಹಿತಾರ್ಥಕ್ಕಿಲ್ಲದಂತಹ ಶರೀರ ಏತಕೆ ಎಂಬ ದಾಸವಾಣಿಯಂತೆ ಮಾನವ ಶರೀರ‌ ಸಾರ್ಥಕವಾಗುವುದು ಪರೋಪಕಾರದಿಂದ.
“ಹಾದಿಬೀದಿಯಲಿರುವ ಕಸದ ಹುಲ್ಲನು
ಹುಡುಕಿ ಮೇದು ಮನೆಗೈದಿ ನಾನಮೃತವಿವೆ.
ಅದನುಂಡು ನನಗೆರಡ ಬಗೆವ
ಮಾನವ ಹೇಳು ನೀನಾರಿಗಾದೆಯೋ ಎಲೆ ಮಾನವಾ?”

ಎಂದು ಪುತಿನ ಅವರು ತಮ್ಮ ಕವಿತೆಯಲ್ಲಿ ಸ್ವಾರ್ಥಕ್ಕಾಗಿ ಸದಾ ಚಿಂತಿಸುವ ಮಾನವನನ್ನು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ.ಗಾಳಿ ಬೀಸುವುದು, ನದಿ ಹರಿಯುವುದು, ಗಿಡ ಹಣ್ಣು ಮತ್ತು ನೆರಳನ್ನು ಕೊಡುವುದು ಇತರರಿಗಾಗಿ ಎನ್ನುವ ಈ ಸೃಷ್ಟಿಯ ಪರಹಿತದ ಸಂದೇಶವನ್ನು ಅರ್ಥಮಾಡಿಕೊಂಡು ಆ ನಿಟ್ಟಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ

ಪ್ರಭಾಕರ ಶೆಟ್ಟಿ ಕೊಂಡಳ್ಳಿ

LEAVE A REPLY

Please enter your comment!
Please enter your name here

Most Popular

error: Content is protected !!